ಸದ್ದಿಲ್ಲದೆ ಬೆಂಗಳೂರು ಜನರಿಗೆ ತೆರಿಗೆ ಬರೆ ಎಳೆಯಲು ಮುಂದಾದ ಬಿಬಿಎಂಪಿ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಸದ್ದಿಲ್ಲದೆ ಟ್ರಾನ್ಸ್​ಪೋರ್ಟ್​ ಸೆಸ್​ ಸಂಗ್ರಹಿಸಲು ಮುಂದಾಗಿದ್ದು, ಈಗಾಗಲೇ ಸಾಕಷ್ಟು ವಿಧದ ತೆರಿಗೆಗಳನ್ನು ನೀಡುತ್ತಿರುವ ನಗರದ ಜನರು ಸದ್ಯದಲ್ಲೇ ಮತ್ತಷ್ಟು ತೆರಿಗೆ ಪಾವತಿಸಬೇಕಿದೆ.

ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳಿಂದಾಗಿ ಬಿಎಂಟಿಸಿ ಬಸ್​ಗಳು ಹಾಳಾಗುತ್ತಿವೆ. ಹೀಗಾಗಿ ಬಿಬಿಎಂಪಿ ನಮಗೆ ತೆರಿಗೆ ಸಂಗ್ರಹಿಸಿ ನೀಡಬೇಕು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದರು. ಈ ಬಗ್ಗೆ ವಿರೋಧ ಪಕ್ಷಗಳಿಂದ ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಸಾರಿಗೆ ಸಚಿವರ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಬಿಬಿಎಂಪಿ ಈಗ ಸಾರ್ವನಿಕರಿಂದ ತೆರಿಗೆ ಸಂಗ್ರಹಿಸಲು ಸಿದ್ಧತೆ ನಡೆಸಿದೆ.

ಬಿಬಿಎಂಪಿ ಬೆಂಗಳೂರಿನ ಆಸ್ತಿ ಮಾಲೀಕರಿಂದ ಹೆಚ್ಚುವರಿಯಾಗಿ ಶೇ.2ರಷ್ಟು ಭೂ ಸಾರಿಗೆ ಉಪಕರವನ್ನು ವಸೂಲಿ ಮಾಡಲು ಮುಂದಾಗಿದ್ದು, ಕೌನ್ಸಿಲ್​ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗಬೇಕಿದೆ. ಕಳೆದ ಮೂರು ವರ್ಷಗಳ ಹಿಂದಷ್ಟೇ ಆಸ್ತಿ ತೆರಿಗೆ ಶೇ.20ರಿಂದ 25ರಷ್ಟು ಹೆಚ್ಚಿಸಿತ್ತು, ಈಗ ಮತ್ತಷ್ಟು ತೆರಿಗೆಯನ್ನು ಹೆಚ್ಚಿಸುವ ಮೂಲಕ ಆಸ್ತಿ ಮಾಲೀಕರ ಮೇಲೆ ಗದಾಪ್ರಹಾರ ಮಾಡಲು ಬಿಬಿಎಂಪಿ ಮುಂದಾಗಿದೆ.