ಐಪಿಎಲ್​ ಟೂರ್ನಿಯ ಬೆಂಗಳೂರಿನ ಪಂದ್ಯದ ವೇಳೆ ಮೆಟ್ರೋ ರೈಲು ಹೆಚ್ಚುವರಿ ಅವಧಿ ಸಂಚಾರ

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಟೂರ್ನಿ ಶನಿವಾರ ಆರಂಭವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28, ಏಪ್ರಿಲ್​ 5, 21, 24 ಮತ್ತು 30 ಹಾಗೂ ಮೇ 4ರಂದು ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಕ್ರಿಕೆಟ್​ ಪ್ರೇಮಿಗಳ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್​) ನಿರ್ಧರಿಸಿದೆ.

ಅದರಂತೆ, ಮಾ.28, ಏಪ್ರಿಲ್​ 5, 21, 24 ಮತ್ತು 30 ಹಾಗೂ ಮೇ 4ರಂದು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ, ಮೈಸೂರು ರಸ್ತೆ, ನಾಗಸಂದ್ರ ಮತ್ತು ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಿಂದ ತಡರಾತ್ರಿ 12.30ರ ವರೆಗೆ ಹೆಚ್ಚುವರಿ ಅವಧಿಗೆ ರೈಲುಗಳ ಸಂಚಾರ ಏರ್ಪಡಿಸುವುದಾಗಿ ಬಿಎಂಆರ್​ಸಿಎಲ್​ ತಿಳಿಸಿದೆ. ಈ ದಿನಾಂಕಗಳಂದು ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್​ ನಿಲ್ದಾಣದಿಂದ ತಡರಾತ್ರಿ 1 ಗಂಟೆಗೆ ಕೊನೆಯ ರೈಲು ಸಂಚರಿಸಲಿದೆ.

50 ರೂ. ಶುಲ್ಕ: ಪಂದ್ಯ ಮುಗಿದ ಬಳಿಕ ತ್ವರಿತವಾಗಿ ಸಂಚರಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಬಿಎಂಆರ್​ಸಿಎಲ್​ ರಿಟರ್ನ್​ ಜರ್ನಿ ಪೇಪರ್​ ಟಿಕೆಟ್​ಗಳನ್ನು ವಿತರಿಸಲು ನಿರ್ಧರಿಸಿದೆ. ಇದರ ಶುಲ್ಕವನ್ನು 50 ರೂ.ಗೆ ನಿಗದಿಯಾಗಿದೆ. ಪಂದ್ಯ ಮುಗಿದ ಬಳಿಕ ಕಬ್ಬನ್​ ಪಾರ್ಕ್​ ನಿಲ್ದಾಣದಿಂದ ಯಾವುದೇ ನಿಲ್ದಾಣವನ್ನು ತಲುಪಲು ರಾತ್ರಿ 10 ಗಂಟೆಯಿಂದ ವಿಸ್ತರಿತ ಸಂಚಾರದ ಅವಧಿ ತಡರಾತ್ರಿ 12.30ರ ವರೆಗೆ ಪ್ರಯಾಣಿಸಲು ಈ ಟಿಕೆಟ್​ಗಳನ್ನು ಬಳಸಬಹುದಾಗಿದೆ. ಪಂದ್ಯ ನಡೆಯುವ ದಿನಗಳಂದು ಮಧ್ಯಾಹ್ನ 3ರಿಂದ ರಾತ್ರಿ 7ರ ವರೆಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ರಿಟರ್ನ್​ ಜರ್ನಿ ಪೇಪರ್​ ಟಿಕೆಟ್​ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಏಪ್ರಿಲ್​ 7ರ ಪಂದ್ಯಕ್ಕೆ ಮಾತ್ರ ರಿಟರ್ನ್​ ಜರ್ನಿ ಪೇಪರ್​ ಟಿಕೆಟ್​ಗಳನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಎಲ್ಲ ನಿಲ್ದಾಣಗಳಲ್ಲೂ ವಿತರಿಸಲಾಗುತ್ತದೆ. 7 ಗಂಟೆಯ ನಂತರ ಕಬ್ಬನ್​ ಪಾರ್ಕ್​ ನಿಲ್ದಾಣದಿಂದ ಈ ಟಿಕೆಟ್​ಗಳನ್ನು ಬಳಸಿ ಪ್ರಯಾಣಿಸಬಹುದಾಗಿದೆ ಎಂದು ಹೇಳಿದೆ.