ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೆರೆ ಅಂಚಿನಲ್ಲಿರುವ ಜವಾಹಾರ್ ನವೋದಯ ವಿದ್ಯಾಲಯದ ಎತ್ತರದ ಗೋಡೆಗಳಲ್ಲಿ ಕಲಾವಿದರು ಚಿತ್ರ ಬಿಡುವಸುವುದರೊಂದಿಗೆ ಪ್ರಕೃತಿಯ ವೈಭವದ ಜತೆಗೆ ಜೀವ ವೈವಿಧ್ಯತೆಯನ್ನು ಜೀವಂತವಾಗಿರಿಸಿದ್ದಾರೆ.
ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಂಸ್ಥೆಯಿಂದ ಬಾಶೆಟ್ಟಿಹಳ್ಳಿ ಕೆರೆಗೆ ಹೊಂದಿಕೊಂಡಿರುವ ಗೋಡೆ ಮೇಲೆ ಪರಿಸರ ಸಂರಕ್ಷಣೆ ಕುರಿತ ಚಿತ್ರಗಳನ್ನು ಕಲಾವಿದರು ಭಾನುವಾರ ಬಿಡಿಸಿದರು.
ಕೆರೆಯಂಚಿನಲ್ಲಿ ಪ್ರಕೃತಿಯ ಭೌಗೋಳಿಕ ಸೌಂದರ್ಯಕ್ಕೆ ಒತ್ತು ನೀಡುವುದರೊಂದಿಗೆ ಹಲವಾರು ಪಕ್ಷಿ ಪ್ರಬೇಧಗಳನ್ನು ಹಾಗೂ ಜಲಚರಗಳ ಜೀವಂತಿಕೆಯನ್ನು ಕಲಾ ಪ್ರಿಯರು ಕೈಚಳಕದ ಮೂಲಕ ತೋರ್ಪಡಿಸಿದ್ದಾರೆ.
ಮಾನವ ಕುಲಕ್ಕೆ ಪ್ರಕೃತಿಯೇ ಜೀವಾಳ: ವೇಗವಾಗಿ ಬೆಳೆವ ಮಹಾನಗರಗಳೇ ಪ್ರಕೃತಿಗೆ ಕಂಟಕವಾಗಿವೆ, ಹೆಚ್ಚಾದ ಕಾರ್ಖಾನೆ, ಕೈಗಾರಿಕೆಗಳಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಭೂ ಸ್ವಾಧೀನದಂತಹ ಅಮಾನುಷ ಕಾರ್ಯದಿಂದ ಪ್ರಕೃತಿ ಅವಸಾನದತ್ತ ಸಾಗಿದೆ. ಈ ನಿಟ್ಟಿನಲ್ಲಿ ಪರಿಸರ ಹಾಗೂ ಕೆರೆಗಳ ರಕ್ಷಣೆಯ ಜಾಗೃತಿ ಪ್ರಸ್ತುತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಿಂಬತವಾದ ಚಿತ್ರಗಳು ಪರಿಸರ ಕಾಳಜಿಗೆ ಹಾಗೂ ಕೆರೆಗಳ ಸಂರಕ್ಷಣೆಗೆ ಸಾಕ್ಷಿಯಾಗಿವೆ, ಏಕೆಂದರೆ ಮಾನವ ಕುಲಕ್ಕೆ ಪ್ರಕೃತಿಯೇ ಜೀವಾಳವಾಗಿದೆ. ಅರ್ಥ್ ಸ್ಟುಡಿಯೋಸ್ ಕೆ.ಸಾಕ್ಷಿ, ಎಸ್.ಆಶಾ, ಡಬ್ಲ್ಯೂಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಂಸ್ಥೆಯ ವೈ.ಟಿ.ಲೋಹಿತ್, ಶಶಿಕಲಾ ಐಯ್ಯೇರ್, ಡಾ.ಶಾಂತನು ಗುಪ್ತ, ಕಾರ್ತಿಕ್ ಗೌಡ ನವೋದಯ ಚಾರಿಟೆಬಲ್ ಟ್ರಸ್ಟ್ ಆರ್.ಜನಾರ್ಧನ ಇದ್ದರು.
ಚಿತ್ರ ಬಿಡಿಸಿದ 50 ಜನ: ಕೆರೆಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕುರಿತಾಗಿ ಭಾಶೆಟ್ಟಿಹಳ್ಳಿ ಕೆರೆಯ ಅಂಚಿನ ಗೋಡೆಗಳಿಗೆ ಕೆರೆ ಸಂರಕ್ಷಣೆ ಹಾಗೂ ಪ್ರಸ್ತುತ ಪರಿಸರಕ್ಕೆ ಎದುರಾಗಿರುವ ತೊಂದರೆಗಳ ಕುರಿತು ಸುಮಾರು 50 ಜನರು ಮಾಹಿತಿಯುಳ್ಳ ಚಿತ್ರಗಳನ್ನು ಬಿಡಿಸಿದ್ದಾರೆ.
ಕೆರೆಗೆ ಬರುವವರಿಗೆ ಮತ್ತು ಹಾದು ಹೋಗುವವರಿಗೆ ಕೆರೆಯ ಸಂರಕ್ಷಣಾ ಮಹತ್ವ ತಿಳಿಸುವ ಉದ್ದೇಶದಿಂದ, ಕೆರೆಯ ಜೀವವೈವಿದ್ಯತೆ, ಕೆರೆಗಳ ಮಹತ್ವ, ಕೆರೆಗಳಿಗೆ ಇರುವ ತೊಂದರೆಗಳು ಮತ್ತು ಚಿಟ್ಟೆಗಳ ಬಗ್ಗೆ ಚಿತ್ರಗಳನ್ನು ಬಿಡಿಸಲಾಗಿದೆ. ಪಕ್ಕದ ಆವರಣದಲ್ಲಿ ಚಿಟ್ಟೆ ಉದ್ಯಾನವನ್ನು ಸಹ ಮಾಡಲಾಗುತ್ತಿದೆ.
ಕೌಶಿಕ್‌ಕೆ.ಎಸ್., ಅರ್ಥ್ ಸ್ಟುಡಿಯೋಸ್ ಕಲಾವಿದ