ಸಂವಿಧಾನ ಮುಟ್ಟಿದರೆ ದೇಶದಲ್ಲಿ ರಕ್ತಪಾತ

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಮುಟ್ಟಿದರೆ ಈ ದೇಶದಲ್ಲಿ ರಕ್ತಪಾತವೇ ನಡೆದು ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಎಚ್ಚರಿಸಿದರು.
ಎನ್.ಆರ್.ಕ್ಷೇತ್ರದ ಮೀನಾ ಬಜಾರ್, ಶಾಂತಿನಗರ, ಮಂಡಿಮೊಹಲ್ಲಾ ಸೇರಿದಂತೆ ವಿವಿಧೆಡೆ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಪರ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ವಿಶ್ವದಲ್ಲಿಯೇ ಅತ್ಯುತ್ತಮವಾದ ಸಂವಿಧಾನವನ್ನು ಬದಲಿಸಿದರೆ ಮೀಸಲಾತಿ ಹೋಗಿ ಅಸಮಾನತೆ ಹೆಚ್ಚಾಗುತ್ತದೆ. ಹಿಂದೆ ಇದ್ದಂತೆ ಶ್ರೇಣಿಕೃತ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ. ಇದರಿಂದ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದರು.

ವಿಜಯಶಂಕರ್‌ಹಿಂದೆ ಬಿಜೆಪಿಯಲ್ಲಿದ್ದರೇ ಹೊರತು ಅವರು ಆರ್‌ಎಸ್‌ಎಸ್‌ನವರಲ್ಲ. ಅವರು ಮೂಲತಃ ಕಾಂಗ್ರೆಸ್‌ನವರು. ಅವರೇನಾದರೂ ಆರ್‌ಎಸ್‌ಎಸ್‌ನಲ್ಲಿ ಇದ್ದಿದ್ದರೆ ಮಾತನಾಡಿಸುತ್ತಿರಲಿಲ್ಲ. ಕಾಂಗ್ರೆಸ್‌ಗೂ ಕರೆದುಕೊಳ್ಳುತ್ತಿರಲಿಲ್ಲ ಎನ್ನುವ ಮೂಲಕ ಅಲ್ಪ ಸಂಖ್ಯಾತರ ಮನವೊಲಿಸುವ ಯತ್ನ ಮಾಡಿದರು.
ಹಾಲಿ ಸಂಸದ ಪ್ರತಾಪ್ ಸಿಂಹ ಒಬ್ಬ ಮತಾಂಧನಾಗಿದ್ದು, ಆತನಿಗೆ ಮನುಷ್ಯತ್ವವೇ ಇಲ್ಲ.

ಮುಖ್ಯಮಂತ್ರಿಯಾಗಿದ್ದಾಗ ಜಗದೀಶ ಶೆಟ್ಟರ್, ಯಡಿಯೂರಪ್ಪ ಕೂಡ ಟಿಪ್ಪು ಜಯಂತಿಯಲ್ಲಿ ಕಿರೀಟ ಧರಿಸಿದ್ದರು. ನಾವು ಮುಸಲ್ಮಾನ ಅಂತಾ ಬೊಬ್ಬೆ ಹೊಡೆದಿದ್ದರು. ಆದರೆ ನಾವು ಟಿಪ್ಪು ಜಯಂತಿ ಆಚರಿಸಲು ಮುಂದಾದಾಗ ಟಿಪ್ಪು ಒಬ್ಬ ಮತಾಂಧ ಅಂತಾ ಗಲಭೆ ಎಬ್ಬಿಸಿದರು. ಇವರಿಗೆ ಟಿಪ್ಪುವಿನ ಇತಿಹಾಸ ಗೊತ್ತಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಶಾಸಕ ತನ್ವೀರ್‌ಸೇಠ್, ಮಾಜಿ ಶಾಸಕ ವಾಸು , ಮೇಯರ್ ಪುಷ್ಪಲತಾ ಜಗನ್ನಾಥ, ಜೆಡಿಎಸ್ ಮುಖಂಡ ಅಬ್ದುಲ್ಲಾ, ಜೆಡಿಎಸ್ ನಗರ ಉಪಾಧ್ಯಕ್ಷ ಜಿ.ಮಂಜು, ಉಪಮೇಯರ್ ಮಹ್ಮದ್ ಶಫಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *