ಬ್ಯಾಡಗಿ: ಯುವಪೀಳಿಗೆಗೆ ಆರೋಗ್ಯ ಬಗ್ಗೆ ಕಾಳಜಿ, ಜಾಗೃತಿ ಮೂಡಿಸುವ ಮೂಲಕ ಸದೃಢ ಸಮಾಜ ನಿರ್ವಿುಸಬೇಕಿದೆ. ರಕ್ತದಾನ ಶಿಬಿರದಿಂದ ವಿದ್ಯಾರ್ಥಿಗಳು, ಯುವಕರು ಸಹಕಾರ ಗುಣ ಬೆಳೆಸಿಕೊಳ್ಳಲಿದ್ದಾರೆ ಎಂದು ಪರಿಸರ ಜಾಗೃತಿ ಹೋರಾಟಗಾರ ರಾಜು ಹುಲ್ಲತ್ತಿ ಹೇಳಿದರು.

ಇಲ್ಲಿನ ಬಿಇಎಸ್ ಕಾಲೇಜನಲ್ಲಿ ದಿ. ನಿವೃತ್ತ ಶಿಕ್ಷಕ ಬಿ.ಎಚ್. ಬಡ್ಡಿಯವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಅಪಘಾತ, ಹೆರಿಗೆ ಇತ್ಯಾದಿ ಸೇರಿದಂತೆ ತುರ್ತು ಸಂದರ್ಭದಲ್ಲಿ ಸಾವು-ನೋವಿನ ಮಧ್ಯೆ ಹೋರಾಡುತ್ತಿದ್ದ ಬಹುತೇಕ ರೋಗಿಗಳಿಗೆ ರಕ್ತದ ಅಗತ್ಯವಿರುತ್ತದೆ. ಆಗ ನಾವು ಅವರ ಗುಂಪಿಗೆ ಹೊಂದುವ ರಕ್ತ ಹುಡುಕುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ರಕ್ತನಿಧಿ ಕೇಂದ್ರದಲ್ಲಿ ಕಾಯ್ದಿಡುವ ವ್ಯವಸ್ಥೆಯಿದೆ. ಇಂತಹ ಕಾರ್ಯಕ್ರಮ ಸಾರ್ವಜನಿಕರು ಏರ್ಪಡಿಸಲು ಮುಂದಾದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿ ಸೇರಿದಂತೆ ಜಿಲ್ಲಾ ಮಟ್ಟದ ರಕ್ತನಿಧಿ ಕೇಂದ್ರದ ಸಿಬ್ಬಂದಿ ಸಹಕರಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸುಮಾರು 70 ಜನರು ರಕ್ತದಾನ ಮಾಡಿದರು. ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಡಾ.ಎಸ್. ನಿಡಗುಂದಿ, ಎಂ.ಎನ್. ಉಮಾಪತಿ, ಯು.ಎನ್. ಛತ್ರದ, ಸಿ.ಎಚ್. ಹಿರೇಮಠ, ಪ್ರವೀಣ ಆಲದಗೇರಿ, ಜಿಲ್ಲಾ ರಕ್ತನಿಧಿ ಕೇಂದ್ರದ ಬಸವರಾಜ ತಳವಾರ ಇತರರಿದ್ದರು.