ಮಂಡ್ಯ: ನಗರದ ಪೇಟೆ ಬೀದಿಯಲ್ಲಿರುವ ತೇರಾಪಂಥ್ ಸಭಾಭವನದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 300ಕ್ಕೂ ಹೆಚ್ಚು ಯೂನಿಟ್ ರಕ್ತಸಂಗ್ರಹವಾಯಿತು.
ರಕ್ತದಾನದ ಅಮೃತ ಸ್ಮರಣೋತ್ಸವ ಘೋಷ ವಾಕ್ಯದೊಂದಿಗೆ ತೇರಾಪಂಥ್ ಯುವಕರ ಪರಿಷತ್ ಜಿಲ್ಲಾ ಘಟಕ ಹಾಗೂ ಕರ್ನಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರತಿವರ್ಷ ರಕ್ತದಾನ ಅಭಿಯಾನ ಆಯೋಜಿಸಿ ಜೀವ ಉಳಿಸುವ ಸುಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಹಲವಾರು ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಸಕಾಲಕ್ಕೆ ರಕ್ತ ಸಿಗದೆ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದರು.
ಯುವಕರ ತಂಡ ಉತ್ತಮ, ಮಹತ್ಕಾರ್ಯ ಮಾಡುತ್ತಿದ್ದಾರೆ. ಇದೇ ರೀತಿ ಸಮಾಜಕ್ಕೆ ಹಲವಾರು ಉಪಯುಕ್ತ ಸೇವಾಕಾರ್ಯಗಳನ್ನು ಮಾಡಲಿಕ್ಕೆ ನಮ್ಮ ಬೆಂಬಲವಿದೆ. ವ್ಯಾಪಾರ, ವಹಿವಾಟುಗಳ ನಡುವೆ ಇಂತಹ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಸಮಾಜಮುಖಿಯಾಗಿ ಸಮಾಜವನ್ನು ಮೇಲೆತ್ತಲು ಪ್ರಯತ್ನಪಡುತ್ತಿದ್ದಾರೆ. ಜೈನ ಸಮಾಜ ನಮ್ಮೆಲ್ಲರಿಗೂ ಹೆಮ್ಮೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪರಿಷತ್ ಜಿಲ್ಲಾಧ್ಯಕ್ಷ ಪ್ರವೀಣ್ ಜೈನ್ ಮಾತನಾಡಿ, ತೇರಾಪಂಥ್ ಯುವ ಪರಿಷತ್ ದೊಡ್ಡಮಟ್ಟದ ರಕ್ತದಾನ ಅಭಿಯಾನ ನಡೆಸಿಕೊಂಡು ಬರುತ್ತಿದೆ. ಈ ಮೂಲಕ ಜೀವ ಉಳಿಸಿ, ತಾವು ಬದುಕಿ, ಬದಕು ಬಿಡಿ ಎನ್ನುವುದು ಧ್ಯೇಯವಾಗಿದೆ. ಎಷ್ಟೋ ಜನರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಅದನ್ನು ನಿಗಿಸಲು ರಕ್ತದಾನದಿಂದ ಮಾತ್ರ ಸಾಧ್ಯವಿದೆ. ಅದರಂತೆ ಜೀವ ಉಳಿಸಿದ ಆತ್ಮ ತೃಪ್ತಿ ಸಿಗುತ್ತದೆ ಎಂದರು.
ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜ, ಮಿಮ್ಸ್ ರಕ್ತನಿಧಿ ಕೇಂದ್ರದ ಮಹಮದ್ ರಫೀಕ್, ಪ್ರಮೋದ್ ಬನ್ಸಾಲಿ, ಕಮಲೇಶ್, ನೇಮ್‌ಚಂದ್‌ಜೈನ್, ಪ್ರದೀಪ್‌ಜೈನ್, ರಾಕೇಶ್ ಬನ್ಸಾಲಿ ಇತರರಿದ್ದರು. ಇದ ವೇಳೆ ಸಂಗ್ರಹವಾದ ರಕ್ತವನ್ನು ಮಿಮ್ಸ್‌ಗೆ ಹಸ್ತಾಂತರ ಮಾಡಲಾಯಿತು. ರಕ್ತದಾನಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.