ಮೈಸೂರು: ನಗರದ ಜೀವಧಾರ ರಕ್ತನಿಧಿ ಕೇಂದ್ರ ಆವರಣದಲ್ಲಿ ಗುರುವಾರ ದುರ್ಗಾ ಫೌಂಡೇಷನ್ ಹಾಗೂ ಅರಿವು ಸಂಸ್ಥೆ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ‘ಜೀವರಕ್ಷಕ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಎಸ್.ಇ. ಗಿರೀಶ್ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯ ಜತೆಗೆ ಬಡವಿದ್ಯಾರ್ಥಿಗಳು ಹಾಗೂ ರೋಗಿಗಳ ಸೇವೆಯಲ್ಲಿ ನಿಸ್ವಾರ್ಥ ಭಾವದೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಲಿಂಗರಾಜು ಮಾತನಾಡಿ, ರಕ್ತದಾನಕ್ಕಿಂತ ಶ್ರೆಷ್ಠವಾದ ದಾನ ಮತ್ತೊಂದಿಲ್ಲ. ಅಪಘಾತ ಮತ್ತಿತರರ ಘಟನೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತದಾನ ಮಾಡುವವರೇ ಎರಡನೇ ದೇವರಾಗುತ್ತಾರೆ. ಅಂತಹ ಕೆಲಸದಲ್ಲಿ ಜೀವದಾರ ರಕ್ತನಿಧಿ ಕೇಂದ್ರ 20 ವರ್ಷದಿಂದ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ ಎಂದರು.
ಈ ಸಂದರ್ಭ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಎಸ್.ಇ. ಗಿರೀಶ್ ಅವರಿಗೆ ಜೀವರಕ್ಷಕ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಹಾಗೂ ಇತರರು ಇದ್ದರು.