ಬೆಳಗಾವಿ:ದಾನಗಳಲ್ಲೇ ರಕ್ತದಾನ ಅತ್ಯಂತ ಶ್ರೇಷ್ಠ. ರಕ್ತದಾನ ಮಾಡಲು ಬಹಳಷ್ಟು ಜನರು ಹಿಂಜರಿಯುತ್ತಾರೆ. ಆದರೆ, ಬೆಳಗಾವಿ ಶಹಾಪುರದ ಕೋರೆ ಗಲ್ಲಿ ನಿವಾಸಿ 69 ವರ್ಷದ ಶಿವಲಿಂಗಪ್ಪ ಮಹಾದೇವಪ್ಪ ಕಿತ್ತೂರ 117 ಬಾರಿ ರಕ್ತದಾನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
ಶಿವಲಿಂಗಪ್ಪ ತಂದೆ ಮಹಾದೇವಪ್ಪ ಹೇಳಿದಂತೆ 1979ರಿಂದ ರಕ್ತದಾನ ಮಾಡುತ್ತ ಬಂದಿದ್ದಾರೆ. ಇಲ್ಲಿವರೆಗೂ 117 ಬಾರಿ ರಕ್ತ ಕೊಟ್ಟು ಮಾದರಿ ಆಗಿದ್ದಾರೆ. ಲಯನ್ಸ್ ಕ್ಲಬ್, ಜಿಲ್ಲಾಸ್ಪತ್ರೆ, ಕೆಎಲ್ಇ ಆಸ್ಪತ್ರೆ, ಮಹಾವೀರ ರಕ್ತ ನಿಧಿ, ಕೆಎಲ್ಇ ಆಯುರ್ವೇದ ಆಸ್ಪತ್ರೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಷ್ಟೇ ಅಲ್ಲದೇ ನಿಡಸೋಸಿಯ ದುರದುಂಡೇಶ್ವರ ಮಠ, ಕಪಿಲೇಶ್ವರ ದೇವಸ್ಥಾನ, ದಾನಮ್ಮ ದೇವಿ ದೇವಸ್ಥಾನ ಸೇರಿ ವಿವಿಧ ಸಾಮಾಜಿಕ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ರಕ್ತದಾನ ಮಾಡಿದ್ದಾರೆ. 2017 ಜೂ.14ರಂದು ವಿಶ್ವ ರಕ್ತದಾನಿಗಳ ದಿನ ಅಂದರೇ ಅವರ 60ನೇ ವಯಸ್ಸಿನಲ್ಲಿ ಕೊನೆಯದಾಗಿ 117ನೇ ಬಾರಿ ರಕ್ತದಾನ ಮಾಡಿದ್ದಾರೆ. ಅದಾದ ಬಳಿಕ ರಕ್ತದಾನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಇವರ ಸೇವೆ ಗುರುತಿಸಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ ವಿವಿಧ ಸಂಘ ಸಂಸ್ಥೆಗಳು ಸತ್ಕರಿಸಿ ಗೌರವಿಸಿವೆ.
ಶಿವಲಿಂಗಪ್ಪ ಕಿತ್ತೂರ ನಮ್ಮ ಸ್ನೇಹಿತ. ಅವರ ತಂದೆಯ ಪ್ರೇರಣೆಯಿಂದ ಸಾಮಾಜಿಕ ಸೇವೆಗೆ ಸಮರ್ಪಿಸಿಕೊಂಡರು. 117 ಬಾರಿ ರಕ್ತದಾನ ಮಾಡಿದ್ದು, ಮಾದರಿ. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸುವುದರ ಜತೆಗೆ ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.
ಶ್ರೀಕಾಂತ ವಿರ್ಗಿ, ಕೆಎಲ್ಇ ರಕ್ತ ಭಂಡಾರದ ಮುಖ್ಯಸ್ಥ ಬೆಳಗಾವಿ