ಬಾಸಿಂಗ ತೊಟ್ಟು ರಕ್ತದಾನ ಮಾಡಿದ ಮದುಮಗ

ಭಟ್ಕಳ: ಮದುವೆಯೆಂದರೆ, ಊಟ, ಉಡುಗೊರೆ ಎಲ್ಲ ಸಾಮಾನ್ಯಾ ಆದರೆ ಇಲ್ಲೊಬ್ಬರು ತಮ್ಮ ಮದುವೆಯ ದಿನ ಬೃಹತ್ ರಕ್ತದಾನ ಶಿಬಿರ ಆಯೋಜಿಸಿ ಮಾದರಿ ಮದುವೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮಂಜಪ್ಪ ಮಹಾದೇವ ನಾಯ್ಕ ಅವರು ಕವಿತಾ ಎಂಬುವವರ ಜೊತೆಗೆ ಗುರುವಾರ ಮುರುಡೇಶ್ವರದಲ್ಲಿ ವಿವಾಹವಾದರು.

ಕುಂದಾಪುರದ ಇಂಡಿಯನ್ ರೆಡ್​ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್​ನ ತಂಡದ ಮೂಲಕ ಮದುವೆ ಮಂಟಪದ ಸಮೀಪವೇ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದ್ದರು. ಮದುವೆಗೆ ಬಂದ 65 ಜನರು ರಕ್ತದಾನ ಮಾಡಿದರು. ಅಷ್ಟೇ ಅಲ್ಲ ಸ್ವತಃ ಮದುಮಗ ಮಂಜಪ್ಪ ಸಹ ಬಾಸಿಂಗ ಕಟ್ಟಿಕೊಂಡು ಬಂದು ರಕ್ತದಾನ ಮಾಡಿರುವುದು ವಿಶೇಷವಾಗಿದೆ. ಅಲ್ಲದೆ, ಉಚಿತ ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. 100 ಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಲ್ಲದೆ, ಮದುವೆಗೆ ಬಂದವರಿಗೆ ಗಿಡಗಳನ್ನು ಕೊಡುಗೆಯಾಗಿ ನೀಡಿದ್ದು ವಿಶೇಷವಾಗಿತ್ತು.

ನಾನು ಸಾಮಾಜಿಕ ಕಾರ್ಯಕರ್ತ. ನನ್ನ ಮದುವೆಯಲ್ಲಿ ಏನಾದರೂ ವಿಶೇಷ ಇರಬೇಕು. ಜನರಿಗೆ ಅನುಕೂಲವಾಗಬೇಕು ಎಂಬುದು ನನ್ನಿಚ್ಛೆ. ಈ ಹಿನ್ನೆಲೆಯಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದೆ. -ಮಂಜಪ್ಪ ಮದುಮಗ

Leave a Reply

Your email address will not be published. Required fields are marked *