ಚಳ್ಳಕೆರೆ: ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಿಂದ ತಾಯಿ ಮತ್ತು ಮಗುವಿನ ರಕ್ಷಣೆ ಮಾಡಿಕೊಳ್ಳುವುದು ತೀವ್ರ ಕಷ್ಟವಾಗುತ್ತಿದೆ ಎಂದು ಜಿಲ್ಲಾ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ರೂಪಾ ಹೇಳಿದರು.
ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಸೋಮವಾರ ಸ್ಥಳೀಯ ಗ್ರಾಪಂ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ಸಮಸ್ಯೆಗೆ ಒಳಗಾಗಿ ಗರ್ಭಿಣಿಯರನ್ನು ಜಿಲ್ಲಾ ಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಜೀವ ಉಳಿಸಿಕೊಳ್ಳಲು ರಕ್ತ ಅಗತ್ಯವಾಗಿರುತ್ತದೆ ಎಂದರು.
ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಕಾಪಾಡಬೇಕು. ರಕ್ತ ಕೊಡುವುದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ.
ಇದರ ಬಗ್ಗೆ ಇರುವ ತಪ್ಪು ತಿಳುವಳಿಕೆ ಜನರಿಂದ ದೂರವಾಗಬೇಕು. ಶಿಬಿರದಲ್ಲಿ 40ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಬಿ.ಆನಂದ್ ಕುಮಾರ್ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮನೆ ಮತ್ತು ಸುತ್ತಲಿನ ಪರಿಸರ ಸ್ವಚ್ಛವಾಗಿರಬೇಕು.
ಇತ್ತೀಚಿನ ದಿನಗಳಲ್ಲಿ ಡೆಂಘೆ ಸೇರಿ ಮಾರಣಾಂತಿಕ ಕಾಯಿಲೆಗಳು ಹರಡುತ್ತಿವೆ. ಇದಕ್ಕೆ ಸ್ಥಳೀಯ ಆಡಳಿತ ಕೈಗೊಳ್ಳುವ ಜಾಗೃತ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದರು.
ಪಿಡಿಒ ಕೊರ್ಲಯ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ಲೋಕನಾಥ್, ಡಾ.ರಘುನಂದನ್, ಸಮುದಾಯ ಆರೋಗ್ಯಾಧಿಕಾರಿ ಕರಿಯಣ್ಣ, ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ, ರಾಜಣ್ಣ, ದಳಪತಿ ಭೀಮಣ್ಣ ಇತರರಿದ್ದರು.