More

    ಮುಚ್ಚಿದ ಸರ್ಕಾರಿ ಬ್ಲಡ್ ಬ್ಯಾಂಕ್

    ಶ್ರವಣ್‌ಕುಮಾರ್ ನಾಳ ಪುತ್ತೂರು
    ರೋಗಿಗಳಿಗೆ ತುರ್ತು ರಕ್ತದ ಕೊರತೆ ನೀಗಿಸಲೆಂದೇ ನಿರ್ಮಾಣಗೊಂಡ ಪುತ್ತೂರಿನ ಸರ್ಕಾರಿ ಬ್ಲಡ್ ಬ್ಯಾಂಕ್ ಮುಚ್ಚಿದೆ. ಬ್ಲಡ್ ಸ್ಟೋರೆಜ್ ಯೂನಿಟ್‌ಗೆ ವಿದ್ಯುತ್ ಸರಬರಾಜು ಮಾಡುವ ಜನರೇಟರ್ 2ವರ್ಷದ ಹಿಂದೆ ಹಾಳಾಗಿದ್ದರಿಂದ ಅನಿವಾರ್ಯವಾಗಿ ಮುಚ್ಚಲಾಗಿದೆ ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಯೇ ದೃಢೀಕರಿಸಿದೆ.
    ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಪುತ್ತೂರು ಸರ್ಕಾರಿ ಆಸ್ಪತ್ರೆ ಅಧೀನದ ಈ ಸರ್ಕಾರಿ ಬ್ಲಡ್ ಬ್ಯಾಂಕ್ 5ವರ್ಷದ ಹಿಂದೆ ಪುತ್ತೂರು ಸರ್ಕಾರಿ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲಿನ ಸರ್ಕಾರಿ ಆರೋಗ್ಯ ಕೇಂದ್ರಗಳ ರೋಗಿಗಳಿಗೆ ತುರ್ತು ರಕ್ತದ ಬೇಡಿಕೆ ಪೂರೈಸಲು ನಿರ್ಮಿಸಲಾಗಿದೆ. ಇದು ಕಾರ್ಯಾರಂಭಗೊಂಡ 2 ವರ್ಷದೊಳಗೆ ಬ್ಲಡ್ ಸ್ಟೋರೆಜ್ ಯೂನಿಟ್ ಸಂಪರ್ಕಿಸುವ ಜನರೇಟರ್ ಹಾಳಾಗಿದೆ. ಆರಂಭದಲ್ಲಿ ದುರಸ್ತಿಗೊಳಿಸಿದ್ದರೂ ಕಳಪೆಗುಣಮಟ್ಟದ ಜನರೇಟರ್ ಅಳವಡಿಸಿದ್ದರಿಂದ ಮುಂದಿನ ದಿನಗಳಲ್ಲಿ ಇದರ ದುರಸ್ತಿ ಸಾಧ್ಯವಾಗಿಲ್ಲ. ಪುತ್ತೂರಿನ ಸರ್ಕಾರಿ ಬ್ಲಂಡ್ ಬ್ಯಾಂಕ್ ಮುಚ್ಚಿರುವ ಬಗ್ಗೆ ಸ್ವತಃ ಪುತ್ತೂರು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯೇ ತಾಪಂ ಪಾಲನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

    ಗೋದಾಮಾದ ಬ್ಲಡ್ ಬ್ಯಾಂಕ್ ಕಟ್ಟಡ
    ಪುತ್ತೂರು ಸರ್ಕಾರಿ ಆಸ್ಪತ್ರೆ ವಠಾರದಲ್ಲಿರುವ ಈ ಬ್ಲಡ್ ಬ್ಯಾಂಕ್ ಕಟ್ಟಡವನ್ನು ಸರ್ಕಾರಿ ಆಸ್ಪತ್ರೆಯ ಗೋದಾಮಾಗಿ ಪರಿವರ್ತಿಸಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಬ್ಲಡ್ ಸ್ಟೋರೆಜ್ ಯೂನಿಟ್ ಬಳಕೆಯಿಲ್ಲದೆ ಮೂಲೆಗುಂಪಾಗಿದೆ. ಸರ್ಕಾರಿ ಬ್ಲಡ್ ಬ್ಯಾಂಕ್ ಕಟ್ಟಡದ ಮೇಲ್ಭಾಗದ ಆರ್‌ಸಿಸಿ ಛಾವಣಿಯಲ್ಲಿ ಬಿರುಕು ಬಿದ್ದು ಮಳೆಗಾಲದಲ್ಲಿ ಸೋರುತ್ತದೆ. ಈ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕಟ್ಟಡ ದುರಸ್ತಿಗೊಳಿಸುವಂತೆ ಕೋರಿ ಮೇಲಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

    ವೆನ್ಲಾಕ್ ಆಸ್ಪತ್ರೆಯಿಂದ ಬ್ಲಡ್ ಸ್ಟೋರೆಜ್!
    ಮಂಗಳೂರಿನ ವೆನ್ಲಾಕ್ ಬ್ಲಡ್ ಬ್ಯಾಂಕ್‌ನಿಂದ ಪುತ್ತೂರಿನ ಬ್ಲಡ್ ಸ್ಟೋರೆಜ್ ಯೂನಿಟ್‌ಗೆ ಅಗತ್ಯ ರಕ್ತಗಳನ್ನು ತಂದು ಇಲ್ಲಿ ಸ್ಟೋರೆಜ್ ಮಾಡಲಾಗುತ್ತಿತ್ತು. ಪುತ್ತೂರಿನ ಜನತೆಗೆ ಇದೊಂದು ಬ್ಲಡ್ ಬ್ಯಾಂಕ್‌ನಂತೆಯೇ ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳಿಗೆ ಅಗತ್ಯವಿದ್ದಾಗ ಇಲ್ಲಿಂದಲೇ ರಕ್ತ ಪೂರೈಕೆ ಮಾಡಲಾಗುತ್ತಿತ್ತು. ಪ್ರಸ್ತುತ ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್‌ನಿಂದ ಅಗತ್ಯ ರಕ್ತ ಪೂರೈಕೆ ಕಾರ್ಯ ನಡೆಯುತ್ತಿದೆ.

     

    ಪುತ್ತೂರಿನ ಸರ್ಕಾರಿ ಬ್ಲಡ್ ಬ್ಯಾಂಕ್ ಮುಚ್ಚಿರುವ ಬಗ್ಗೆ ಕಾರಣ ಕೇಳಲಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕಾರಣವನ್ನೂ ನೀಡಿದ್ದಾರೆ. ಇದೊಂದು ತಾಂತ್ರಿಕ ಸಮಸ್ಯೆ. ಈ ಬಗ್ಗೆ ಪುತ್ತೂರು ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲೂ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಅನುದಾನ ನೀಡಲಾಗುವುದು.
    ಸಂಜೀವ ಮಠಂದೂರು ಪುತ್ತೂರು ಶಾಸಕ

    ಪುತ್ತೂರು ಬ್ಲಡ್ ಸ್ಟೋರೆಜ್ ಯೂನಿಟ್‌ಗೆ ಜನರೇಟರ್ ಕೊರತೆಯಿರುವುದರಿಂದ 2ವರ್ಷದಿಂದ ಕಾರ್ಯನಿರ್ವಹಿಸದೆ ಮುಚ್ಚಲಾಗಿದೆ. ಹೊಸ ಜನರೇಟರ್ ಒದಗಿಸುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ಜನರೇಟರ್ ಬಂದ ಕೂಡಲೇ ಮತ್ತೆ ಬ್ಲಡ್ ಸ್ಟೋರೆಜ್ ಯೂನಿಟ್ ಕಾರ್ಯಾರಂಭಗೊಳ್ಳಲಿದೆ.
    ಆಶಾ ಪುತ್ತೂರಾಯ, ಪುತ್ತೂರು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts