ಅಂಧರಿಗೆ ದಾರಿದೀಪವಾದ ವಿಜಯವಾಣಿ

ಬೆಂಗಳೂರು: ಸದಾ ಒಂದಿಲ್ಲೊಂದು ಹೊಸತನದ ಮೂಲಕ ನಾಡಿನ ಜನತೆಯ ಮನ ಗೆದ್ದಿರುವ ವಿಜಯವಾಣಿ ಮತ್ತೊಂದು ವಿನೂತನ ಕಾರ್ಯಕ್ರಮದ ಮೂಲಕ ಸಂಚಲನ ಮೂಡಿಸಿದೆ. ವಿಶ್ವ ದೃಷ್ಟಿ ದಿನದ ಪ್ರಯುಕ್ತ ಗುರುವಾರ ಅಂಧರಿಗಾಗಿ ಬ್ರೖೆಲ್ ಲಿಪಿಯಲ್ಲಿ ವಿಶೇಷ ಸಂಚಿಕೆ ಹೊರ ತಂದಿದ್ದು, ರಾಜ್ಯದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ಪತ್ರಿಕೆ ಸ್ಯಾವ್ಲಾನ್ ಕಂಪನಿ ಸಹಯೋಗದಲ್ಲಿ ಈ ಸಂಚಿಕೆ ಹೊರತಂದಿದೆ. ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ್ಲ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಬ್ರೖೆಲ್ ಲಿಪಿಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿ, ಅಂಧ ಮಕ್ಕಳಿಗೆ ವಿತರಣೆ ಮಾಡಿದರು. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರು.

‘ಅನುವಂಶೀಯತೆ, ಅಪೌಷ್ಟಿಕತೆ, ವೈದ್ಯಕೀಯ ಸೌಲಭ್ಯದ ಕೊರತೆ, ಪಾಲಕರ ಅಜ್ಞಾನ ಸೇರಿ ವಿವಿಧ ಕಾರಣದಿಂದ ಮಕ್ಕಳು ಅಂಗವೈಕಲ್ಯದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಬಹುತೇಕ ಸಂದರ್ಭದಲ್ಲಿ ಜ್ವರ ತಲೆಗೇರುವುದರಿಂದ ಕಣ್ಣಿನ ದೃಷ್ಟಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಇನ್ನು ರಸ್ತೆ ಅಪಘಾತ ಹಾಗೂ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಅಂಗಾಂಗವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಡ ಜನತೆ ಹಾಗೂ ಅಂಗವಿಕಲರಿಗಾಗಿ ಹಲವಾರು ಯೋಜನೆ ರೂಪಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಂಧರಿಗಾಗಿಯೇ ಜಾರಿಗೊಳಿಸಿರುವ ಯೋಜನೆಯ ಲಾಭವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಈ ವಿಶೇಷ ಸಂಚಿಕೆ ಹೊರತರಲಾಗಿದೆ’ ಎಂದು ಡಾ.ವಿಜಯ ಸಂಕೇಶ್ವರ ತಿಳಿಸಿದರು. ಸಮರ್ಥನಂ ಅಂಗವಿಕಲರ ಸಂಸ್ಥೆಯ ಎಲ್​ಆರ್​ಸಿ ಮುಖ್ಯಸ್ಥ ಚಂದ್ರಶೇಖರ್, ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಸತೀಶ್, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಉಪಸ್ಥಿತರಿದ್ದರು.

ಅಪೌಷ್ಟಿಕತೆ ನಿವಾರಿಸಲು ಸ್ಪಿರುಲಿನಾ ಮಾತ್ರೆ: ವಿಟಮಿನ್ ಎ ಕೊರತೆಯಿಂದ ದೃಷ್ಟಿದೋಷ ಸಮಸ್ಯೆ ಎದುರಾಗುತ್ತದೆ. ಅಪೌಷ್ಟಿಕತೆಯಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಎಲ್ಲ ಬಗೆಯ ಪೌಷ್ಟಿಕ ಅಂಶ ಒಳಗೊಂಡಿರುವ ಸ್ಪಿರುಲಿನಾ ಮಾತ್ರೆ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಸಹಾಯಕ. ಸ್ಪಿರುಲಿನಾ ಸೇವನೆಯಿಂದ ಸಾವಿರಕ್ಕೂ ಅಧಿಕ ಮಕ್ಕಳ ದೃಷ್ಟಿದೋಷ ಸಮಸ್ಯೆ ನಿವಾರಣೆಯಾಗಿದೆ. ಸ್ವತಃ ನಾನೇ ಮಾತ್ರೆ ನೀಡಿ, ಅದರ ಫಲಿತಾಂಶವನ್ನು ಗಮನಿಸಿರುವೆ. ಆದ್ದರಿಂದ ಸಮರ್ಥನಂ ಸಂಸ್ಥೆಗೆ ಪ್ರತಿ ತಿಂಗಳು 200 ಸ್ಪಿರುಲಿನಾ ಬಾಟಲಿ ವಿತರಣೆ ಮಾಡಲಾಗುತ್ತದೆ. ತೀವ್ರ ಅಪೌಷ್ಟಿಕತೆ ಸೇರಿ ಬೇರೆ ಬೇರೆ ನ್ಯೂನತೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಐದು ತಿಂಗಳವರೆಗೆ ನಿರಂತರವಾಗಿ ಮಾತ್ರೆಯನ್ನು ನೀಡಬೇಕು. ಅಷ್ಟೇ ಅಲ್ಲ, ಪ್ರಗತಿಯ ವರದಿಯನ್ನು ಪ್ರತಿ ತಿಂಗಳು ಸಂಸ್ಥೆ ನೀಡಬೇಕು. ಬಳಿಕ ಸ್ಪಿರುಲಿನಾ ಸೇವನೆಯಿಂದಾದ ಬೆಳವಣಿಗೆಗಳ ವರದಿಯನ್ನು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಮೂಲಕ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ಡಾ.ವಿಜಯ ಸಂಕೇಶ್ವರ ತಿಳಿಸಿದರು.

ಆನಂದ ಸಂಕೇಶ್ವರ ಪರಿಕಲ್ಪನೆ

ಬ್ರೖೆಲ್ ಲಿಪಿಯಲ್ಲಿ ವಿಶೇಷ ಸಂಚಿಕೆ ಪರಿಕಲ್ಪನೆ ಹಿಂದಿರುವವರು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ. ಅವರು ಹಾಗೂ ವಿಆರ್​ಎಲ್ ಮೀಡಿಯಾದ ಜಾಹೀರಾತು ವಿಭಾಗದ ಉಪಾಧ್ಯಕ್ಷ ಅರುಣ್ ಕೆ.ಆರ್. ನಾಲ್ಕೈದು ದಿನಗಳ ಪರಿಶ್ರಮದಿಂದ ಈ ಸಂಚಿಕೆ ಹೊರತಂದಿದ್ದಾರೆ ಎಂದು ಡಾ.ವಿಜಯ ಸಂಕೇಶ್ವರ ಶ್ಲಾಘಿಸಿದರು.

10 ಲಕ್ಷ ರೂಪಾಯಿ ದೇಣಿಗೆ

1997ರಲ್ಲಿ ಮಹಾಂತೇಶ್ ನೇತೃತ್ವದಲ್ಲಿ ಆರಂಭವಾದ ಸಮರ್ಥನಂ ಸಂಸ್ಥೆ 2 ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿವಿಧ ಸೇವೆ ನೀಡಿದೆ. ಸದ್ಯ 500ಕ್ಕೂ ಅಧಿಕ ಅಂಗವಿಕಲ ಮಕ್ಕಳು ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶಿಕ್ಷಣ, ಕೌಶಲ, ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆ, ಆರೋಗ್ಯ,ಪುನರ್ವಸತಿ ಹಾಗೂ ಉತ್ತಮ ವಾತಾವರಣ ನಿರ್ವಿುಸುವ ಮುಂದಾಳತ್ವವನ್ನು ಸಂಸ್ಥೆ ವಹಿಸಿಕೊಂಡಿದೆ. 9,550ಕ್ಕೂ ಅಧಿಕ ಯುವಕ-ಯುವತಿಯರು ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 2010ರಲ್ಲಿ ಕ್ಯಾಬಿ ಸಂಘಟನೆ ಹುಟ್ಟುಹಾಕಿದ್ದು, ಇಲ್ಲಿನ ಅಂಗವಿಕಲರು ಎರಡು ಬಾರಿ ವಿಶ್ವಕಪ್ ಜಯಿಸಿದ್ದಾರೆ. ಸಮರ್ಥನಂ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ವಿಜಯ ಸಂಕೇಶ್ವರ, ವಿಆರ್​ಎಲ್ ಫೌಂಡೇಷನ್​ನಿಂದ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು. ಇದಕ್ಕೂ ಮೊದಲು ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳ ಜತೆಗೆ ಮಾತುಕತೆ ನಡೆಸಿ, ಮಾಹಿತಿ ಪಡೆದುಕೊಂಡರು.

ಅಂಧರು ಎಂಬ ಹಿಂಜರಿಕೆ ಇಟ್ಟುಕೊಳ್ಳಬೇಡಿ. ಸಾಮಾನ್ಯರಿಗಿಂತ ನೀವು ಹೆಚ್ಚು ಚುರುಕಾಗಿರುತ್ತೀರಿ. ಅಶ್ವಿನಿ ಅಂಗಡಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ತನ್ನಂತಹ ಅಂಧರಿಗೆ ಆಶ್ರಯ ನೀಡುತ್ತಿದ್ದಾರೆ. ನೀವು ಸಹ ನಿಮ್ಮಲ್ಲಿನ ಪ್ರತಿಭೆಯನ್ನು ಹೊರಗೆಡವಿ ಸಾಧನೆ ಮಾಡಿ.

| ಡಾ.ವಿಜಯ ಸಂಕೇಶ್ವರ ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್

ಸರ್ಕಾರದ ಯೋಜನೆ ಬಗ್ಗೆ ಮಾಹಿತಿ ಹೊತ್ತ ಈ ಸಂಚಿಕೆ ವಿಶ್ವ ದೃಷ್ಟಿ ದಿನದ ಪ್ರಯುಕ್ತ ವಿಜಯವಾಣಿ ನೀಡಿದ ಅತ್ಯುತ್ತಮ ಉಡುಗೊರೆಯಾಗಿದೆ. ಇದೇ ರೀತಿ ಎಲ್ಲ ಮಾಧ್ಯಮಗಳು ಸಾಮಾಜಿಕ ಕಳಕಳಿ ಮೆರೆಯಬೇಕಿದೆ.

| ಕಿರಣ್ ಕಂಪ್ಯೂಟರ್ ಶಿಕ್ಷಕ

ವಿಶ್ವ ದೃಷ್ಟಿ ದಿನದಂದು ನಮ್ಮನ್ನು ನೆನಪಿಸಿಕೊಂಡ ವಿಜಯವಾಣಿಗೆ ಧನ್ಯವಾದಗಳು. ಈ ವಿಶೇಷ ಸಂಚಿಕೆ ಓದಿದ ಬಳಿಕ ಸರ್ಕಾರದಿಂದ ನಾವು ಏನೆಲ್ಲ ಸೌಲಭ್ಯ ಪಡೆದುಕೊಳ್ಳಬಹುದು ಎನ್ನುವುದು ತಿಳಿಯಿತು.

| ಮಹೇಶ್ ಬಿಜಾಪುರ ವಿದ್ಯಾರ್ಥಿ

ಕಣ್ಣು ಜ್ಞಾನೇಂದ್ರಿಯದಲ್ಲಿ ಒಂದಾಗಿದೆ. ಶೇ.90 ದೃಷ್ಟಿ ಮೂಲಕವೇ ಕಲಿಯಬೇಕಾಗುತ್ತದೆ. ಆದರೆ ನಾವು ಅಂತರ್​ದೃಷ್ಟಿ ಮೂಲಕ ಕಲಿತುಕೊಳ್ಳಬೇಕಾಗಿದೆ. ಹೀಗಾಗಿ ನಮ್ಮೊಳಗಿನ ದೃಷ್ಟಿ ಸದಾ ಜಾಗೃತವಾಗಿರಬೇಕು.

| ಚಂದ್ರಶೇಖರ್ ಸಮರ್ಥನಂ ಅಂಗವಿಕಲರ ಸಂಸ್ಥೆಯ ಎಲ್​ಆರ್​ಸಿ ಮುಖ್ಯಸ್ಥ

ಒಬಾಮಾರಿಂದ ಸ್ಪಿರುಲಿನಾ ಜಾಗೃತಿ

ಸ್ಪಿರುಲಿನಾ ಒಂದು ಸಮಗ್ರ ಮತ್ತು ನೈಸರ್ಗಿಕ ಪೂರಕ ಆಹಾರ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನ್ಯ ಮಾಡಿದೆ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆದಿಯಾಗಿ ಅನೇಕ ವಿಶ್ವನಾಯಕರು ಸ್ಪಿರುಲಿನಾ ಬಳಕೆಯನ್ನು ಜನಪ್ರಿಯಗೊಳಿಸಲು ಒತ್ತು ನೀಡಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಅದು ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ದೂರ ಮಾಡುತ್ತದೆ ಎಂಬುದು ಭಾರತದಲ್ಲೂ ಅನೇಕ ಅಧ್ಯಯನ ಗಳಲ್ಲಿ ವೈಜ್ಞಾನಿಕವಾಗಿ ದೃಢ ಪಟ್ಟಿದೆ. ಆರೋಗ್ಯ ಇಲಾಖೆ ಸಹ ಉಚಿತವಾಗಿ ಸ್ಪಿರುಲಿನಾ ಮಾತ್ರೆಯನ್ನು ನೀಡಿತ್ತು. ಆದರೆ ಉಚಿತವಾಗಿ ನೀಡಿದ ಹಿನ್ನೆಲೆ ಮಾತ್ರೆ ಪಡೆದುಕೊಂಡವರು ಕ್ರಮಬದ್ಧವಾಗಿ ಸೇವಿಸದ ಪರಿಣಾಮ ಸೂಕ್ತ ಫಲಿತಾಂಶ ದೊರೆಯಲಿಲ್ಲ ಎಂದು ಡಾ.ವಿಜಯ ಸಂಕೇಶ್ವರ ಹೇಳಿದರು.


ಭವಿಷ್ಯಕ್ಕೆ ಮಾರ್ಗದರ್ಶಿ

ಹುಬ್ಬಳ್ಳಿ: ವಿಶ್ವ ದೃಷ್ಟಿ ದಿನದ ಅಂಗವಾಗಿ ಅಂಧ ಮಕ್ಕಳಿಗಾಗಿ ವಿಜಯವಾಣಿ ದಿನಪತ್ರಿಕೆ ಹೊರತಂದ ಬ್ರೖೆಲ್ ಲಿಪಿಯ ‘ಬೆಳಕು’ ವಿಶೇಷ ಸಂಚಿಕೆಯನ್ನು ನವನಗರ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಗುರುವಾರ ಬಿಡುಗಡೆಗೊಳಿಸಿದರು. ಅಂಧರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇರುವ ವಿವಿಧ ಸೌಲಭ್ಯಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಸಂಚಿಕೆ ಒಳಗೊಂಡಿದೆ. ಇದು ಅಂಧ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿದೆ. ಬ್ರೖೆಲ್ ಲಿಪಿ ವಿಶೇಷ ಸಂಚಿಕೆ ಹೊರತರುತ್ತಿರುವುದು ದೇಶದ ಪತ್ರಿಕೋದ್ಯಮ ಇತಿಹಾಸದಲ್ಲಿಯೇ ಪ್ರಥಮ. ವಿಆರ್​ಎಲ್ ಸಂಸ್ಥೆಯಿಂದ ಹಲವಾರು ಅರ್ಥಪೂರ್ಣ ಸಾಮಾಜಿಕ ಕಾರ್ಯಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಹಾಗೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಆನಂದ ಸಂಕೇಶ್ವರ ಹೇಳಿದರು.

ಆಶ್ರಮದ ಉಪಾಧ್ಯಕ್ಷ ಜಿ.ಆರ್.ಅಂದಾನಿಮಠ ಮಾತನಾಡಿ, ಅಂಧರನ್ನು ಸಮಾಜ ವಕ್ರದೃಷ್ಟಿಯಿಂದ ನೋಡುತ್ತದೆ. ಸಹಾಯ ಮಾಡಬೇಕೆಂಬ ಮನೋಭಾವವುಳ್ಳವರು ವಿರಳ. ವಿಆರ್​ಎಲ್ ಸಂಸ್ಥೆಯ ಸಾಮಾಜಿಕ ಕಾರ್ಯಗಳಿಂದ ಅನೇಕ ಬಡವರು ಹಾಗೂ ಅಂಗವಿಕಲರ ಜೀವನ ಸುಧಾರಿಸಿದೆ ಎಂದರು.

‘ಬೆಳಕು’ ಮಾಹಿತಿಯನ್ನು ಅಂಧ ವಿದ್ಯಾರ್ಥಿಗಳು ಓದಿ ತಿಳಿದುಕೊಂಡರು. ಆಶ್ರಮದ ಧರ್ಮದರ್ಶಿ ಎಸ್.ಎನ್.ಛಬ್ಬಿ, ಜಿ.ಎಂ. ಚಿಕ್ಕಮಠ, ವಿಜಯವಾಣಿ ಸ್ಥಾನಿಕ ಸಂಪಾದಕ ಮೋಹನ ಹೆಗಡೆ, ವಿಜಯವಾಣಿ ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಾಜಿ ಭಿಸೆ ಮತ್ತಿತರರಿದ್ದರು.

ಅಂಧರಿಗಿರುವ ಸೌಲಭ್ಯಗಳು ಹಾಗೂ ಸುತ್ತಲೂ ನಡೆಯುವ ಘಟನೆಗಳನ್ನು ರೇಡಿಯೋ ಮತ್ತಿತರ ಮಾಧ್ಯಮಗಳಿಂದ ಕೇಳಿ ತಿಳಿದುಕೊಳ್ಳುತ್ತಿದ್ದೆವು. ಇದುವರೆಗೆ ಯಾವುದೇ ಪತ್ರಿಕೆ ಅಂಧ ವಿದ್ಯಾರ್ಥಿಗಳಿಗೆ ಬ್ರೖೆಲ್ ಲಿಪಿಯಲ್ಲಿ ವಿಶೇಷ ಸಂಚಿಕೆ ಪ್ರಕಟಿಸಿರಲಿಲ್ಲ. ಈ ಸಂಚಿಕೆ ಎಲ್ಲ ಅಂಧ ಮಕ್ಕಳ ಶಾಲೆಗಳಿಗೆ ತಲುಪುವಂತಾಗಬೇಕು.

| ಸಿದ್ರಾಮ, ಅಂಧ ವಿದ್ಯಾರ್ಥಿ ನವನಗರ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮ