More

    ಅಂಧನಿಗೂ ತಪ್ಪದ ಅಲೆದಾಟ!

    ಹುಬ್ಬಳ್ಳಿ: ತಾಲೂಕಿನ ಪಾಳೆ ಗ್ರಾಮದ 3 ಗುಂಟೆ ಜಾಗದ ಉತಾರ ಪಡೆಯಲು ಅಂಧ ವ್ಯಕ್ತಿಯೊಬ್ಬರು ಸತತ 4 ತಿಂಗಳಿಂದ ಇಲ್ಲಿನ ಮಿನಿ ವಿಧಾನಸೌಧಕ್ಕೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದಾರೆ. ನಿತ್ಯವೂ ಒಂದಿಲ್ಲೊಂದು ಕಾರಣ ಹೇಳಿ ದಿನ ದೂಡುವ ಅಧಿಕಾರಿಗಳು ‘ಇಂದು ಹೋಗಿ ನಾಳೆ ಬಾ’ ಎಂದು ಅಮಾಯಕ ಅಂಧನನ್ನು ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಿದ್ದಾರೆ.

    ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ನಿವಾಸಿ ಶಿವಪ್ಪ ತಿಮ್ಮಣ್ಣ ಆನಿ, ಕಚೇರಿಗೆ ಅಲೆದಾಡುತ್ತಿರುವ ಅಂಧ ವ್ಯಕ್ತಿ. ಶಿವಪ್ಪ ಪತ್ನಿ ಗಂಗವ್ವ ತವರು ಮನೆಯಿಂದ ಪಿತ್ರಾರ್ಜಿತವಾಗಿ ಪಾಳೆ ಗ್ರಾಮದಲ್ಲಿನ ಮೂರು ಗುಂಟೆ ನಿವೇಶನ ದೊರೆತಿದೆ. ಛಬ್ಬಿ ಗ್ರಾಮ ಪಂಚಾಯ್ತಿಯಲ್ಲಿ 1,200 ರೂ. ಶುಲ್ಕ ಭರಿಸಿ ಸರ್ವೆ ಮಾಡಿಸಿ, ನಂತರ ಆ ಜಾಗದ ಉತಾರ ನೀಡುವಂತೆ ಸೆಪ್ಟೆಂಬರ್ 14ರಂದು ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ಅರ್ಜಿ ಸಲ್ಲಿಸಿದ್ದರು. ನಾಲ್ಕು ತಿಂಗಳಾದರೂ ಉತಾರ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಶಿವಪ್ಪ ‘ವಿಜಯವಾಣಿ’ ಬಳಿ ಅಳಲು ತೋಡಿಕೊಂಡರು.

    ಎರಡೂ ಕಣ್ಣುಗಳ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರೂ ಶಿವಪ್ಪ ಯಾರ ಬಳಿಯೂ ಕೈಚಾಚದೇ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕುರ್ಚಿಗಳಿಗೆ ವೈರ್ ಹೆಣೆದುಕೊಡುವ ಕಾಯಕ ಮಾಡಿಕೊಂಡಿರುವ ಶಿವಪ್ಪ ಬಿಡಿಗಾಸು ಸಂಪಾದಿಸಿ ಅದರಲ್ಲೇ ಜೀವನ ಕಂಡುಕೊಂಡಿದ್ದಾರೆ. ನಿತ್ಯ ಹಳ್ಳಿಯಿಂದ ಕಲಘಟಗಿ ಮಾರ್ಗವಾಗಿ ಬಸ್​ನಲ್ಲಿ ಬಂದು ಬರಿಗೈಯಲ್ಲಿ ವಾಪಸಾಗುತ್ತಿದ್ದಾರೆ. ಸದ್ಯ ಭೂಮಿ ಸರ್ವರ್ ಸಮಸ್ಯೆಯಾಗಿದೆ. ಹಾಗಾಗಿ, ಶಿವಪ್ಪನವರ ಉತಾರ ನೀಡುವುದು ತಡವಾಗುತ್ತಿದೆ ಎನ್ನುತ್ತಾರೆ ಗ್ರಾಮ ಲೆಕ್ಕಾಧಿಕಾರಿ ವಿ.ಎಂ. ಗಾಣಿಗೇರ.

    ಅಂಧ ಎಂಬುದು ಗೊತ್ತಿದ್ದರೂ ಸರ್ವರ್ ಸರಿಯಾದ ಕೂಡಲೇ ತಿಳಿಸುತ್ತೇವೆ ಎಂದು ಸಂಬಂಧಿಸಿದವರು ಖಚಿತ ಭರವಸೆ ನೀಡಲಿಲ್ಲ. ಹೀಗಾಗಿ, ಶಿವಪ್ಪ ಅಲೆದಾಡುವಂತಾಗಿದೆ. ಗಮನಾರ್ಹ ಸಂಗತಿ ಎಂದರೆ, ಆಗೊಮ್ಮೆ ಈಗೊಮ್ಮೆ ಸರ್ವರ್ ಸರಿಯಾದಾಗ ಅನೇಕರ ಕೆಲಸ ಮಾಡಿಕೊಡಲಾಗಿದೆ.

    ಜೀವನವೇ ಕಷ್ಟವಾಗಿದೆ: ನಿತ್ಯವೂ ಮಿನಿ ವಿಧಾನಸೌಧಕ್ಕೆ ಅಲೆದು ಅಲೆದು ಚಪ್ಪಲಿ ಸವೆದು ಹೋಗಿವೆ. ಕೇವಲ ಒಂದು ಉತಾರಕ್ಕಾಗಿ ನಾಲ್ಕು ತಿಂಗಳಿಂದ ಇಷ್ಟು ಅಲೆದಾಡಿಸುತ್ತಿದ್ದಾರೆ. ದುಡಿಮೆಯೂ ಇಲ್ಲದೇ ಜೀವನ ನಡೆಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಶಿವಪ್ಪ ಆನಿ.

    ಹಿಂಗಾರು ಬೆಳೆ ವಿಮೆ, ಪರಿಹಾರದ ದತ್ತಾಂಶ ಮಾಹಿತಿ ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಕೆಲದಿನ ತಾಂತ್ರಿಕ ಸಮಸ್ಯೆಯಿಂದ ಸರ್ವರ್ ಡೌನ್ ಆಗಿತ್ತು. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು.
    | ಪ್ರಕಾಶ ನಾಶಿ, ತಹಸೀಲ್ದಾರ್, ಹುಬ್ಬಳ್ಳಿ ಗ್ರಾಮೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts