More

    ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ

    ಯಲ್ಲಾಪುರ: ಹಿತ್ಲಳ್ಳಿ, ಮಾವಳ್ಳಿಯಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಗುತ್ತಿಗೆದಾರರು ವಿಳಂಬ ಮಾಡುತ್ತಿರುವುದರಿಂದ ಇಬ್ಬರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಪುನಃ ಟೆಂಡರ್ ಕರೆದು ಕಾಮಗಾರಿ ಆರಂಭಿಸಿ ಎಂದು ಶಾಸಕ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಟ್ಟಣದ ಅಡಕೆ ಭವನದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕುಡಿಯುವ ನೀರಿನ ಸಲುವಾಗಿ ಬೋರವೆಲ್ ಕೊರೆಯಲು ಹಣಕಾಸಿನ ತೊಂದರೆ ಇದ್ದರೆ ಹೇಳಿ, ತಕ್ಷಣ ಹಣ ಕೊಡಿಸುತ್ತೇನೆ ಎಂದರು.
    ಮದನೂರು, ಕಿರವತ್ತಿ, ಜಯಂತಿ ನಗರಕ್ಕೆ 8 ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ. ಆದರೂ ಕೊರತೆ ಆಗುತ್ತಿದೆ ಎನ್ನುವ ಪಿಡಿಒ ಅಣ್ಣಪ್ಪ ವಡ್ಡರ ಅವರ ಮಾತಿಗೆ ಇನ್ನು ನಾಲ್ಕು ಹೆಚ್ಚುವರಿ ಟ್ಯಾಂಕರ್ ಮೂಲಕ ಸಾಕಷ್ಟು ನೀರು ಪೂರೈಸಲು ಶಾಸಕರು ಸೂಚಿಸಿದರು.
    ಐದು ಕಡೆ ಕಾಲುಸಂಕ ಕಾಮಗಾರಿ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಪುನಃ ಟೆಂಡರ್ ಕರೆಯಲು ಸೂಚಿಸಿದರು. ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕೆಲಸ ಮಾಡಿ, ಅಭಿವೃದ್ಧಿಗೆ ಸಹಕರಿಸಬೇಕು.

    ಬಡವರಿಗೆ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ವಿಶೇಷವಾಗಿ ಅರಣ್ಯ ಇಲಾಖೆಯವರು ರೈತರಿಗೆ ಅನಾವಶ್ಯಕ ಸತಾಯಿಸುವುದು, ನೋಟಿಸ್ ಕೊಡುವುದು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ವಜ್ರಳ್ಳಿ, ಕಳಚೆ, ಮಾಗೋಡ, ತೇಲಂಗಾರ ಭಾಗದಲ್ಲಿನ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ನೀರಿನ ಕೊರತೆ ನೀಗಿಸಬೇಕು ಎಂದು ಡಾ.ನರೇಂದ್ರ ಪವಾರ ಹೇಳಿದರು.

    ಪಶುವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಇಡಗುಂದಿಯಲ್ಲಿ ಹೊಸ ಕಟ್ಟಡ ಆದರೆ ತಾಲೂಕಿನ ಎಲ್ಲ ಕಡೆ ಇಲಾಖೆ ಸುಸಜ್ಜಿತ ಕಟ್ಟಡ ಹೊಂದಿದಂತಾಗುತ್ತದೆ ಎಂದು ಪಶು ವೈದ್ಯಕೀಯ ಇಲಾಖೆಯ ಡಾ.ಸುಬ್ರಾಯ ಭಟ್ ತಿಳಿಸಿದರು.

    ತೀವ್ರ ಬಿಸಿಲಿನಿಂದ ಅಡಕೆ ಸಿಂಗಾರ ಒಣಗುತ್ತಿದೆ. ಶೇ.20 ರಷ್ಟು ಬೆಳೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಸುಭಾಸ ಹೆಗಡೆ ಮಾಹಿತಿ ನೀಡಿದರು.

    ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ತಹಸೀಲ್ದಾರ್ ಗುರುರಾಜ ಎಂ., ಡಿಡಿಪಿಐ ಬಸವರಾಜ, ತಾ.ಪಂ. ಇಒ ಜಗದೀಶ ಕಮ್ಮಾರ, ಆಡಳಿತಾಧಿಕಾರಿ ನಟರಾಜ ಟಿ.ಪಿ., ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts