ಉಡುಪಿ: ಜಿಲ್ಲೆಯಲ್ಲಿ ಬ್ಲಾಕ್‌ಫಂಗಸ್ ಸೋಂಕು ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತೆಕಟ್ಟೆ ನಿವಾಸಿ 76 ವರ್ಷದ ಮಹಿಳೆ ಶನಿವಾರ ಮೃತಪಟ್ಟಿದ್ದಾರೆ. ಇವರು ಕೋವಿಡ್‌ನಿಂದ ಬಾಧಿತರಾಗಿದ್ದರು. ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಮಹಿಳೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೋರ್ವ 44 ವರ್ಷದ ವ್ಯಕ್ತಿ ಬ್ಲಾಕ್‌ಫಂಗಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ದಾಖಲಾಗಿದ್ದ 7 ಮಂದಿ ಬ್ಲಾಕ್‌ಫಂಗಸ್ ಸೋಂಕಿತರು ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಬ್ಲಾಕ್‌ಫಂಗಸ್‌ಗೆ ಹೊರ ಜಿಲ್ಲೆಯ ಒಬ್ಬ ರೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ ವಿಜಯವಾಣಿಗೆ ತಿಳಿಸಿದ್ದಾರೆ.
