13,000 ಕೋಟಿ ರೂ. ಕಾಳಧನ ಘೋಷಿಸಿದ್ದ ಉದ್ಯಮಿ ಕಣ್ಮರೆ

ಅಹಮದಾಬಾದ್: ತಮ್ಮ ಬಳಿ 13,000 ಕೋಟಿ ರೂಪಾಯಿಗೂ ಹೆಚ್ಚಿನ ಕಾಳಧನ ಇರುವುದಾಗಿ ಅಕ್ಟೋಬರ್ ತಿಂಗಳಲ್ಲಿ ಆದಾಯ ಘೋಷಣೆ ಯೋಜನೆಯ ಅಡಿಯಲ್ಲಿ ಘೋಷಿಸಿದ್ದ ಅಹಮದಾಬಾದ್ ಮೂಲದ ಉದ್ಯಮಿ ಮಹೇಶ್ ಷಾ ಕಣ್ಮರೆಯಾಗಿದ್ದಾರೆ. ಘೋಷಿತ ಕಪ್ಪು ಹಣದ ಶೇಕಡಾ 25ರಷ್ಟು ಹಣವನ್ನು ನವೆಂಬರ್ 30 ರ ಗಡುವಿನ ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದ್ದು, ಈದಿನಾಂಕಕ್ಕೆ ಸ್ವಲ್ಪ ದಿನ ಮುಂಚಿತವಾಗಿ ಮಹೇಶ್ ಷಾ ಕಣ್ಮರೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಅಧಿಕಾರಿಗಳು ಮಹೇಶ್ ಷಾ ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಸ್ವಯಂ ಘೋಷಣೆಯ ಅಡಿಯಲ್ಲಿ ಷಾ ಕಾಳಧನ ಘೊಷಣೆಗೆ ನೆರವಾಗಿದ್ದ ಲೆಕ್ಕ ಪರಿಶೋಧಕ ತೆಹ್ಮುಲ್ ಸೇತ್ನಾ ಅವರ ಜೊತೆಗೆ ಅದಾಯ ತೆರಿಗೆ ಅಧಿಕಾರಿಗಳು ಷಾ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ. ಷಾ ಅವರು ಎಲ್ಲಿದ್ದಾರೆ ಎಂಬ ಬಗೆಗಾಗಲೇ, ಅವರ ವ್ಯವಹಾರ ಹೂಡಿಕೆಗಳ ಬಗೆಗಾಗಲೇ ತಮಗೆ ಏನೂ ಗೊತ್ತಿಲ್ಲ ಎಂದಿರುವ ಸೇತ್ನಾ ‘ಓದಿದ್ದು ಕೇವಲ 12ನೇ ತರಗತಿಯಾಗಿದ್ದರೂ ಷಾ ತುಂಬಾ ಬುದ್ಧಿವಂತ’ ಎಂದು ಹೇಳಿದರು.

ದೊಡ್ಡ ದೊಡ್ಡ ವ್ಯವಹಾರಗಳನ್ನು ನಡೆಸುತ್ತಿರುವ ಷಾ ವಿಶ್ವಾಸಾರ್ಹತೆ ಬಗ್ಗೆ ಸಂಶಯ ಪಡೆಲು ನನಗೇನೂ ಕಾರಣಗಳಿಲ್ಲ ಎಂದೂ ಸೇತ್ನಾ ಹೇಳಿದ್ದಾರೆ. ಷಾ ಅವರು ಕಳೆದ 15 ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಅವರು ತಲೆಮರೆಸಿಕೊಂಡಿಲ್ಲ. ಬಂದ ಬಳಿಕ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಾರೆ ಎಂದು ಷಾ ಕುಟುಂಬ ತಿಳಿಸಿದೆ.

ಏಜೆನ್ಸೀಸ್.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *