ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಗುರುಗಳು ಮಾರ್ಗದರ್ಶನದಂತೆ ನಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸಲಹೆ ನೀಡಿದರು.
ತಾಲೂಕಿನ ಅಗಲಗುರ್ಕಿ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ 75ನೇ ಜಯಂತ್ಯುತ್ಸ ಉದ್ಘಾಟಿಸಿ ಮಾತನಾಡಿದರು.
ಅನೇಕ ವರ್ಷಗಳಿಂದಲೂ ಆದಿಚುಂಚನಗಿರಿ ಮಠ ಶೈಕ್ಷಣಿಕ, ಆರೋಗ್ಯ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಸರ್ವೋದಯ, ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಯುವ ಪೀಳಿಗೆಗಳಿಗೆಉತ್ತಮ ಮಾರ್ಗದರ್ಶನ ನೀಡುತ್ತಿದೆ. ಗುಣಮಟ್ಟದ ಶಿಕ್ಷಣ ಮೂಲಕ ಒಳ್ಳೆಯ ವ್ಯಕ್ತಿತ್ವ ಬೆಳೆಸುತ್ತಿದೆ ಎಂದರು.
ಆದಿಚುಂಚಗಿರಿ ಮಠ ಅನ್ನದಾನ, ವಿದ್ಯಾದಾನ ಸೇರಿ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಬಣ್ಣಿಸಿದರು.
ಸಮಾಜದ ಹಿತಕ್ಕಾಗಿ ಜೀವನ ಮುಡುಪಾಗಿಟ್ಟ ಮಹನೀಯರಿಗೆ ಸಾವಿಲ್ಲ. ಅದರಂತೆ ಬಾಲಗಂಗಾಧರನಾಥ ಸ್ವಾಮೀಜಿ ಸೇವಾ ಕಾರ್ಯಗಳಿಂದ ಅಮರರಾಗಿದ್ದಾರೆ. ಮಕ್ಕಳು ಶ್ರೀಗಳ ಆದರ್ಶ ತತ್ವಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಪಿಯು ಕಾಲೇಜಿನ ಡೀನ್ ಡಾ ಮಧುಸೂಧನ್ ಎಂದರು.
ವಿದ್ಯಾರ್ಥಿಗಳಿಂದ ವಿಶೇಷ ಪೂಜೆ, ಭಜನೆ ನಡೆಯಿತು. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಬಿಜಿಎಸ್ ಆಂಗ್ಲಶಾಲೆ ಮುಖ್ಯಶಿಕ್ಷಕ ಡಿ.ಸಿ.ಮೋಹನ್ ಕುಮಾರ್, ಎಬಿವಿಪಿ ವಿಭಾಗೀಯ ಸಂಚಾಲಕ ಎನ್.ಮಂಜುನಾಥ್‌ರೆಡ್ಡಿ ಇತರರಿದ್ದರು.