
ಹಿರೇಕೆರೂರ: ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದು ಅತಿ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರ ಸಹಾಯ, ಸಹಕಾರ, ಸಲಹೆ ಪಡೆದು ಹೆಚ್ಚಿನ ಪಕ್ಷ ಸಂಘಟನೆಗೆ ಮುಂದಾಗುವಂತೆ ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಬಾಳಂಬೀಡ ಗ್ರಾಮದ ಅವರ ಗೃಹ ಕಚೇರಿಯಲ್ಲಿ ಸೋಮವಾರ ತಾಲೂಕು ಬಿಜೆಪಿ ಮಂಡಳದ ವತಿಯಿಂದ ಎರ್ಪಡಿಸಿದ್ದ ಪಕ್ಷದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಮಂಡಳದ ನೂತನ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತೀಮಠ ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.
2018 ರಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಚುನಾವಣೆ ಎದುರಿಸಿ, ಗೆಲುವು ಸಾಧಿಸಿ ಸಾಕಷ್ಟು ಅಭಿವೃದ್ಧಿ ಮಾಡುವ ಮೂಲಕ ತಕ್ಕಮಟ್ಟಿಗೆ ಇಲ್ಲಿನ ಜನತೆಯ ಋಣ ತಿರಿಸಿದ ತೃಪ್ತಿ ನನಗಿದೆ ಎಂದರು.
ಅಧಿಕಾರಿಗಳ ಮೇಲೆ ವಿನಾಕಾರಣ ಗೂಬೆ: ಆರ್ಸಿಬಿ ವಿಜಯೋತ್ಸವ ವೇಳೆ ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿ 11 ಜನ ಅಮಾಯಕರ ಪ್ರಾಣವನ್ನು ಬಲಿ ಪಡೆದಿದ್ದು, ವಿಧಾನಸೌಧದ ಮುಂದೆ ಯಾರೂ ಸತ್ತಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಈಗ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬ ಕಲ್ಪನೆ ಅವರಿಗಿಲ್ಲ. ಇದನ್ನು ಮರೆಮಾಚಲು ಪೋಲಿಸ್ ಮತ್ತು ಅಧಿಕಾರಿಗಳ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ ಎಂದರು.
ಅಧಿಕಾರ ಸ್ವೀಕರಿಸಿದ ತಾಲೂಕು ಬಿಜೆಪಿ ಮಂಡಳ ನೂತನ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತೀಮಠ ಮಾತನಾಡಿ, ನೀವು ನನ್ನ ಮೇಲೆ ಇಟ್ಟ ನಂಬಿಕೆ, ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗದಂತೆ, ನಿಮ್ಮ ನೀರಿಕ್ಷೆಯನ್ನು ಹುಸಿಗೊಳಿಸಿದೆ, ಎಲ್ಲರ ಮಾರ್ಗದರ್ಶನ, ಸಲಹೆ, ಸಹಕಾರ ಪಡೆದು ಪಕ್ಷವನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ಪಾಲಾಕ್ಷಗೌಡ ಪಾಟೀಲ, ಗೀತಾ ದಂಡಗೀಹಳ್ಳಿ, ಅಶೋಕ ಪಾಟೀಲ, ಡಿ.ಸಿ. ಪಾಟೀಲ, ಜಗದೀಶ ದೊಡ್ಡಗೌಡ್ರ, ಎಸ್.ಎಸ್.ಪಾಟೀಲ, ಬಿ.ಎನ್.ಬಣಕಾರ, ಮಲ್ಲಿಕ್ ರೆಹಾನೆ, ಪಪಂ ಸದಸ್ಯರಾದ ರಮೇಶ ತೋರಣಗಟ್ಟಿ, ಅಲ್ತಾಫಖಾನ್ ಪಠಾಣ, ಗುರುಶಾಂತ ಯತ್ತಿನಹಳ್ಳಿ ಇತರರು ಮಾತನಾಡಿದರು. ತಾಲೂಕು ಬಿಜೆಪಿ ಮಂಡಳದ ನಿಕಟ ಪೂರ್ವ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ದುರ್ಗೆಶ ತಿರಕಪ್ಪನವರ, ರವಿಶಂಕರ ಬಾಳಿಕಾಯಿ, ಲಕ್ಷ್ಮಣ ಪೂಜಾರ, ಮನೋಹರ ವಡ್ಡಿನಕಟ್ಟಿ, ಜಿಲಾನಿ ಬಳಿಗಾರ, ಪುಟ್ಟನಗೌಡ ಪಾಟೀಲ, ಆರ್.ಎನ್.ಗಂಗೋಳ, ರುದ್ರಗೌಡ ಪಾಟೀಲ ಹಾಗೂ ಮುಖಂಡರು, ಕಾರ್ಯಕರ್ತರು, ವಿವಿದ ಘಟಕಗಳ ಪದಾಧಿಕಾರಿಗಳು ಇದ್ದರು. ಬಿಜೆಪಿ ಕಾರ್ಯದರ್ಶಿ ನಿಂಗಾಚಾರಿ ಮಾಯಾಚಾರಿ ನಿರ್ವಹಿಸಿದರು.