ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಟಾಮ್​ ವಡಕ್ಕನ್​ಗೆ ಭಾರಿ ನಿರಾಸೆ

ತಿರುವನಂತಪುರಂ: ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಗುರುವಾರ ರಾತ್ರಿ ಹಲವು ರಾಜ್ಯಗಳ ಒಟ್ಟು 184 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ರಾಜಕೀಯ ಭವಿಷ್ಯ ಅರಸಿ ಇತ್ತೀಚೆಗಷ್ಟೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಟಾಮ್​ ವಡಕ್ಕನ್​ ಅವರಿಗೆ ಬಿಜೆಪಿಯ ಪಟ್ಟಿ ಭಾರಿ ನಿರಾಸೆಯುಂಟು ಮಾಡಿದೆ.

ಕೇರಳದಲ್ಲಿ ಒಟ್ಟಾರೆ 20 ಲೋಕಸಭೆ ಕ್ಷೇತ್ರಗಳಿದ್ದು, ಬಿಜೆಪಿಯು ಗುರುವಾರ ರಾತ್ರಿ ಒಟ್ಟು 13 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಕೇಂದ್ರ ಸಚಿವ ಅಲ್ಫಾನ್ಸೋ ಕಣ್ಣನ್​ತಮ್​ ಮತ್ತು ಮಿಜೋರಾಮ್​ನ ಮಾಜಿ ರಾಜ್ಯಪಾಲ ರಾಜಶೇಖರನ್​ ಅವರ ಹೆಸರುಗಳೂ ಇವೆ. ಆದರೆ, ಬಹುನಿರೀಕ್ಷಿತ ಪಟ್ಟಣಂತಿಟ್ಟ ಲೋಕಸಭೆ ಕ್ಷೇತ್ರದ ಟಿಕೆಟ್​ ಅನ್ನು ಘೋಷಣೆಯೇ ಮಾಡಿಲ್ಲ. ಬಿಜೆಪಿಯ ಈ ನಡೆ ಹಲವರಿಗೆ ಆಸೆಗೆ ತಣ್ಣೀರೆರಚಿದೆ.

ಅಯ್ಯಪ್ಪನ ಸನ್ನಿಧಿ ಶಬರಿಮಲೆಯನ್ನೂ ಒಳಗೊಂಡಿರುವ ಪಟ್ಟಣಂತಿಟ್ಟ ಕ್ಷೇತ್ರ ಮೇಲೆ ಬಿಜೆಪಿಯ ರಾಜ್ಯಾಧ್ಯಕ್ಷ ಶ್ರೀಧರನ್​ ಪಿಳ್ಳೈ ಅವರೂ ಸೇರಿದಂತೆ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಟಾಮ್​ ವಡಕ್ಕನ್​ ಅವರೂ ಕಣ್ಣಿಟ್ಟಿದ್ದಾರೆ. ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪನ್ನು ವಿರೋಧಿಸಿ ಬಿಜೆಪಿ ಪಟ್ಟಣಂತಿಟ್ಟ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಹೋರಾಟಗಳನ್ನು ಹಮ್ಮಿಕೊಂಡಿತ್ತು. ಇಲ್ಲಿ ಹಿಂದು ಮತಗಳು ಧ್ರುವೀಕರಣಗೊಂಡು ಪಕ್ಷಕ್ಕೆ ಅನುಕೂಲವಾಗಬಹುದು ಎಂಬುದು ಬಿಜೆಪಿ ನಾಯಕರ ಅಭಿಲಾಷೆ. ಇದೇ ಕಾರಣಕ್ಕೇ ಪಟ್ಟಣಂತಿಟ್ಟ ಲೋಕಸಭೆ ಕ್ಷೇತ್ರದ ಟಿಕೆಟ್​ಗಾಗಿ ಬಿಜೆಪಿಯಲ್ಲಿ ಭಾರಿ ಬೆಡಿಕೆ ಇದೆ. ಆದರೆ, ಈ ಕ್ಷೇತ್ರದ ಟಿಕೆಟ್​ ಘೋಷಣೆಯಾಗದಿರುವುದು ಆಕಾಂಕ್ಷಿಗಳಲ್ಲಿ ಬೇಸರ ಉಂಟುಮಾಡಿದೆ.

One Reply to “ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಟಾಮ್​ ವಡಕ್ಕನ್​ಗೆ ಭಾರಿ ನಿರಾಸೆ”

Comments are closed.