ಹುಬ್ಬಳ್ಳಿ: ಚುನಾಯಿತ ಸರ್ಕಾರವನ್ನು ಉರುಳಿಸುವುದೇ ಬಿಜೆಪಿ ಕೆಲಸ. ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಅದನ್ನೇ ಮಾಡಿದ್ದಾರೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರದ ಮೇಲೆ ಕಣ್ಣು ಹಾಕಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಸಿಂಗಾಪುರದಲ್ಲಿ ಕುಳಿತುಕೊಂಡು ಸರ್ಕಾರ ಬೀಳಿಸುವ ವಿಚಾರ ಕುರಿತು ನನಗೆ ಮಾಹಿತಿ ಇಲ್ಲ. ಅದೇನೇ ಇದ್ದರೂ ನಮ್ಮ ನಾಯಕರು ಗಮನ ಹರಿಸುತ್ತಾರೆ ಎಂದರು.
ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ 100 ಮನೆಗಳು ಕುಸಿದು ಬಿದ್ದಿರುವ ಬಗ್ಗೆ ಮಾಹಿತಿ ಇದೆ. ಎಷ್ಟು ಕೃಷಿ ಪ್ರದೇಶ, ಬೆಳೆ ಹಾನಿ ಸಂಭವಿಸಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಮೊದಲು ಬಿತ್ತನೆ ಮಾಡಿದವರಿಗೆ ಹೆಚ್ಚು ಹಾನಿಯಾಗಿದೆ. ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಬಹಳಷ್ಟು ಜನರು ಮನೆ ಕಟ್ಟಿಕೊಂಡಿದ್ದಾರೆ. ವೈಜ್ಞಾನಿಕವೋ-ಅವೈಜ್ಞಾನಿಕವೋ ಎಂಬುದು ಪ್ರಶ್ನೆಯಲ್ಲ. ಸಹಜವಾಗಿಯೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಹಾನಿಗೀಡಾದವರಿಗೆ ಎಷ್ಟು ಒಳ್ಳೆಯದನ್ನು ಮಾಡಬೇಕು ಸರ್ಕಾರ ಮಾಡುತ್ತದೆ ಎಂದರು. ಮಳೆಯಿಂದ ಹಾನಿಗೊಳಗಾದ ಹುಬ್ಬಳ್ಳಿ ನಗರದ ಬೆಂಗೇರಿಯ ಕೆರೆ ಓಣಿಯಲ್ಲಿನ ಮನೆಗಳನ್ನು ಸಚಿವರು ವೀಕ್ಷಿಸಿದರು.