ರಾಮಮಂದಿರ ನಿರ್ಮಾಣಕ್ಕೆ ಬದ್ಧ

ನವದೆಹಲಿ: ‘ನಿಗದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯ ಆದ್ಯತೆ. ಅದಕ್ಕಾಗಿ ನಾವು ಕಟಿಬದ್ಧರಾಗಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗುಡುಗಿದ್ದಾರೆ. ರಾಮ ಲೀಲಾ ಮೈದಾನದಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕಾಂಗ್ರೆಸ್ ವಿರುದ್ಧ ಉಳಿದ ಪಕ್ಷಗಳು ಒಟ್ಟಾಗಿ ಹೋರಾಡುತ್ತಿದ್ದವು. ಈಗ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿವೆ. ಆದರೆ ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅಸಾಧ್ಯ ಎಂದು ಅಮಿತ್ ಷಾ ಹೇಳಿದರು. ಪ್ರಧಾನಿ ಮೋದಿ ಕಾರ್ಯಕಾರಿಣಿ ಉದ್ಘಾಟಿಸಿದರು. ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಗೃಹ ಸಚಿವ ರಾಜನಾಥ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಿತ ಹಲವು ಸಚಿವರು, ಮುಖಂಡರು, ಬಿಜೆಪಿ ಆಡಳಿತದ ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದರು.

ಕರ್ನಾಟಕದಲ್ಲಿ ಸಾಲಮನ್ನಾ ವಿಫಲ: ಕರ್ನಾಟಕದಲ್ಲಿ ರೈತರಿಗೆ ಬ್ಯಾಂಕ್​ಗಳಿಂದ ನೋಟಿಸ್ ಜಾರಿಯಾಗುವ ಪರಿಸ್ಥಿತಿ ನಿರ್ವಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಬಾರಿಗೆ ರೈತರ ಹಿತ ರಕ್ಷಿಸುವ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು ಎಂದು ನಿರ್ಣಯ ಮಂಡಿಸಿ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.

ನೆರೆರಾಷ್ಟ್ರಗಳಲ್ಲಿ ಹಿಂದು, ಸಿಖ್, ಜೈನರು, ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅದಕ್ಕೆ ಹೆದರಿ ಅವರು ನಮ್ಮ ದೇಶಕ್ಕೆ ಬಂದರೆ, ಇಲ್ಲಿ ಅವರನ್ನು ನುಸುಳುಕೋರರು ಎಂದು ಪರಿಗಣಿಸಲಾಗುತ್ತಿತ್ತು. ಅವರ ಅತಂತ್ರ ಸ್ಥಿತಿಗೆ ಪರಿಹಾರವೇ ನಾವು ಮಂಡಿಸಿರುವ ಪೌರತ್ವ ಮಸೂದೆ. ಆದರೆ ರಾಹುಲ್ ಗಾಂಧಿ ಮತ್ತು ಅವರ ಬೆಂಬಲಿಗರಿಗೆ ವಲಸಿಗರು ಮತಗಳಿದ್ದಂತೆ ಅಷ್ಟೇ.

| ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಅಬ್ ಕೀ ಬಾರ್ ಫಿರ್ ಮೋದಿ ಸರ್ಕಾರ್

ಲೋಕಸಭಾ ಚುನಾವಣೆ ಎದುರಿಸುವ ಘೋಷವಾಕ್ಯವನ್ನು ಕಾರ್ಯಕಾರಿಣಿಯಲ್ಲಿ ಮೊಳಗಿಸಲಾಯಿತು. ಅಬ್ ಕೀ ಬಾರ್ ಫಿರ್ ಮೋದಿ ಸರ್ಕಾರ್ (ಈ ಬಾರಿ ಮತ್ತೊಮ್ಮೆ ಮೋದಿ ಸರ್ಕಾರ) ಎಂದು ಸಭೆಯಲ್ಲಿ ಒಕ್ಕೊರಲಿನ ಧ್ವನಿ ಕೇಳಿತು. ಉತ್ತಮ ಕನಿಷ್ಠ ಬೆಂಬಲ ಬೆಲೆ ನಿಗದಿ, ಕೃಷಿ ಉತ್ಪಾದನೆ ಹೆಚ್ಚಳ, ಪ್ರತಿ ಕೃಷಿ ಭೂಮಿಗೆ ನೀರು, ವಿಪತ್ತಿಗೆ ಸೂಕ್ತ ಪರಿಹಾರ, ರೈತರಿಗೆ ಆರ್ಥಿಕ ಭದ್ರತೆ ಸಹಿತ ಹಲವು ನಿರ್ಣಯಗಳಿರುವ ಪಟ್ಟಿಯನ್ನು ಬಿಜೆಪಿ ಸಂಸದರಿಗೆ ಗೃಹ ಸಚಿವ ರಾಜನಾಥ ಸಿಂಗ್ ವಿತರಿಸಿದರು.

Leave a Reply

Your email address will not be published. Required fields are marked *