ಪ್ರಜಾಪ್ರಭುತ್ವದ ಕಗ್ಗೊಲೆಗೆ ಬಿಜೆಪಿ ಯತ್ನ

ಹಾಸನ: ಒಕ್ಕಲಿಗ ಸಮುದಾಯವನ್ನು ರಾಜಕೀಯವಾಗಿ ಮೂಲೆಗುಂಪು ಮಾಡಬೇಕೆಂಬ ಉದ್ದೇಶದಿಂದ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆಗೆ ಯತ್ನಿಸುತ್ತಿದ್ದು ಸಮುದಾಯದ ಬಾಂಧವರು ಇನ್ನಾದರೂ ಎಚ್ಚೆತ್ತು ಪ್ರಬಲ ಹೋರಾಟ ನಡೆಸಬೇಕಿದೆ ಎಂದು ಕೆಂಪೇಗೌಡ ವೇದಿಕೆ ರಾಜ್ಯಾಧ್ಯಕ್ಷ ರಾಕೇಶ್‌ಗೌಡ ಹೇಳಿದರು.

ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ಸಹಿಸದೆ ಒಂದು ವರ್ಷಕ್ಕೆ ಅಧಿಕಾರದಿಂದ ಕೆಳಗಿಳಿಸಿದರು. ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಮೇಲೆ ನಿರಂತರ ಐಟಿ ದಾಳಿ ಮೂಲಕ ಸ್ಥೆರ್ಯ ಕುಗ್ಗಿಸಲು ಪ್ರಯತ್ನಿಸಿದರು. ಒಕ್ಕಲಿಗರು ರಾಜಕೀಯವಾಗಿ ಮೇಲೆಳದಂತೆ ಬಿಜೆಪಿ ಮುಖಂಡರು ಹುನ್ನಾರ ನಡೆಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ಎಚ್.ಡಿ. ಕುಮಾರಸ್ವಾಮಿ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಆದರೆ ಭ್ರಷ್ಟಾಚಾರದ ಮೂಲಕ ರಾಜ್ಯ ರಾಜಕಾರಣವನ್ನು ಹಾಳು ಮಾಡಿದ ಬಿಜೆಪಿಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ದೂರಿದರು.

ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ರೈತರ ಸಾಲ ಮನ್ನಾ, ಬಡವರ ಬಂಧು, ಜಲಾಮೃತ, ಆಂಗ್ಲ ಮಾಧ್ಯಮ ಶಾಲೆ ತೆರೆಯುವ ಮೂಲಕ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಅಧಿಕಾರಕ್ಕಾಗಿ ಶಾಸಕರನ್ನೇ ಖರೀದಿಸುವ ಹೀನ ಮಟ್ಟಕ್ಕೆ ಬಿಜೆಪಿ ಇಳಿದಿದೆ ಎಂದು ಆಪಾದಿಸಿದರು.

ಒಕ್ಕಲಿಗರ ಸಂಘದ ನಿರ್ದೇಶಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸಮುದಾಯಕ್ಕೆ ಅನ್ಯಾಯವಾಗುತ್ತಿರುವ ಸಂದರ್ಭದಲ್ಲಿ ಸುಮ್ಮನೆ ಕೂರದೆ ಬೀದಿಗಿಳಿದು ಹೋರಾಟ ನಡೆಸಬೇಕು. ಸರ್ಕಾರ ಪತನಗೊಳಿಸುವ ವಿಫಲ ಯತ್ನದಿಂದ ಬಿಜೆಪಿ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೇದಿಕೆಯ ಸಕಲೇಶಪುರ ತಾಲೂಕು ಅಧ್ಯಕ್ಷ ಪ್ರಸಾದ್, ಪದಾಧಿಕಾರಿಗಳಾದ ಗಿರೀಶ್, ಸಂತೋಷ್, ದರ್ಶನ್ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *