ಕ್ಷೇತ್ರ ಗೆಲ್ಲುವುದೊಂದೇ ಗುರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಬರುವ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಅಗತ್ಯ ತಯಾರಿ ಮಾಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್​ 1ರಂದು ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಎಚ್ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಿಮಿತ್ತ ರಾಜ್ಯದಲ್ಲಿ ಮೊದಲಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶ ಯಶಸ್ವಿಯಾಗಿದೆ. ಆ ಸಮಾವೇಶದ ಉಸ್ತುವಾರಿ ನನಗೆ ವಹಿಸಲಾಗಿತ್ತು. ಕಲಬುರಗಿ ಸಮಾವೇಶದ ಜವಾಬ್ದಾರಿಯನ್ನೂ ನನಗೆ ನೀಡಿದ್ದರಿಂದ ಈ ಸಭೆಯಲ್ಲಿ ಭಾಗವಹಿಸಿದ್ದೇನೆ. ಮಾ.1ರ ಬೃಹತ್ ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ಮುಖಂಡರಿಗೆ ಹೇಳಿದರು.
ಕಳೆದ ಚುನಾವಣೆಗಿಂತ ಹೆಚ್ಚು ಶ್ರಮವಹಿಸಬೇಕು. ರಾಜ್ಯದಿಂದ ಕೇಂದ್ರಕ್ಕೆ ಕನಿಷ್ಠ 20ರಿಂದ 22 ಸಂಸದರನ್ನು ಕಳುಹಿಸುವ ಗುರಿ ಹೊಂದಲಾಗಿದೆ. ಈ ಗುರಿ ತಲುಪಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೋ ಅವರನ್ನು ನಿಷ್ಠೆಯಿಂದ ಗೆಲ್ಲಿಸುವ ಪಣ ತೊಡಬೇಕು ಎಂದರು.
ಸಂಸದ ಭಗವಂತ ಖೂಬಾ, ಎಂಎಲ್ಸಿ ರಘುನಾಥ ಮಲ್ಕಾಪುರೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಪ್ರಭು ಚವ್ಹಾಣ್, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ವೆಂಕಟರೆಡ್ಡಿ ಮುದ್ನಾಳ್, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ ಚಿಂಚನಸೂರ, ಬಾಬುರಾವ ಚವ್ಹಾಣ್, ಸುನೀಲ ವಲಾ್ಲೃಪುರೆ, ಮುಖಂಡರಾದ ಚಂದು ಪಾಟೀಲ, ನಾಗರತ್ನ ಕುಪ್ಪಿ, ದಯಾಘನ ಧಾರವಾಡಕರ್, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ರವಿ ಬಿರಾದಾರ ಇತರರಿದ್ದರು. ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸ್ವಾಗತಿಸಿದರು. ಮಹಾನಗರ ಜಿಲ್ಲಾಧ್ಯಕ್ಷರಾದ ಎಂಎಲ್ಸಿ ಬಿ.ಜಿ.ಪಾಟೀಲ ವಂದಿಸಿದರು.

ಉಮೇಶ್ ರೆಬಲ್ ಕಾಂಗ್ರೆಸ್​​ಗೆ ಟ್ರಬಲ್: ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ರೆಬಲ್ ನಾಯಕರಾಗಿ ಕಾಂಗ್ರೆಸ್​ಗೆ ಟ್ರಬಲ್ ನೀಡುತ್ತಿದ್ದಾರೆ. ಅವರು ಬಿಜೆಪಿಯಿಂದ ಲೋಕಸಭೆಗೆ ಸ್ಫರ್ಧಿಸುತ್ತಾರೆ ಎಂಬುದು ನಿರ್ಧಾರವಾಗಿಲ್ಲ. ಯಾರೇ ನಿಂತರೂ ಕಲಬುರಗಿ ಕ್ಷೇತ್ರದಲ್ಲಿ ಕಮಲ ಅರಳುವುದು ನಿಶ್ಚಿತ ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಸರ್ಕಾರ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ ಕೈಹಾಕಲ್ಲ. ಆ ಕೆಲಸ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಸದಾ ಸಿದ್ಧರಾಗಿದ್ದಾರೆ. ಮೊದಲೇ ಅವರು ಕುತಂತ್ರ ರಾಜಕಾರಣಿ. ಜನತಾದಳದಲ್ಲಿದ್ದವರು ಕಾಂಗ್ರೆಸ್​ಗೆ ಬಂದು ಮುಖ್ಯಮಂತ್ರಿಯಾಗಿದ್ದೂ ಕುತಂತ್ರದ ಭಾಗವಾಗಿಯೇ ಎಂಬುದು ಇತಿಹಾಸ ಎಂದು ವ್ಯಂಗ್ಯವಾಡಿದರು.