ಬರ ನಿರ್ವಹಣೆ ಮಂತ್ರಿ ಖರ್ಗೆಗಿಲ್ಲ ಕಾಳಜಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬರದಿಂದ ಕಂಗೆಟ್ಟಿರುವ ಜನರ ನೋವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬರ ಪರಿಹಾರ ಕಾರ್ಯ ಸಮರ್ಪಕ ನಡೆಸಿಕೊಂಡು ಹೋಗುವಲ್ಲಿ ಹಾಗೂ ರೈತರ, ಕೃಷಿ ಕಾರ್ಮಿಕರ ನೋವಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಬಿಜೆಪಿ ಬರ ಅಧ್ಯಯನ ತಂಡದ ಮುಖಂಡರಾದ ಶಾಸಕ ಶ್ರೀರಾಮುಲು ಆರೋಪಿಸಿದ್ದಾರೆ.
ಸೇಡಂ, ಚಿತ್ತಾಪುರ ಮೊದಲಾದ ಕಡೆ ಪಕ್ಷದ ಮುಖಂಡರೊಂದಿಗೆ ಭಾನುವಾರ ಪ್ರವಾಸ ನಡೆಸಿ ಬರ ಸ್ಥಿತಿ ಅರಿತು, ನಗರದಲ್ಲಿ ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿ ಖರ್ಗೆ ನಾಪತ್ತೆ ಆದಂತಾಗಿದ್ದಾರೆ. ಜಿಲ್ಲೆಗೆ ಬೆಳಗ್ಗೆ ಬಂದು ಸಂಜೆ ಹೋಗುತ್ತಿದ್ದಾರೆ ಹೊರತು, ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಜನರು ಗುಳೇ ಹೋಗುವುದನ್ನು ತಡೆದಿಲ್ಲ. ಕುಡಿವ ನೀರಿಗಾಗಿ ತಾಲೂಕಿಗೆ ಕೇವಲ 50 ಲಕ್ಷ ರೂ. ಕೊಟ್ಟಿದ್ದೇ ಬಂತು, ಉಳಿದಂತೆ ಬರ ಪರಿಹಾರ ಕೆಲಸ ಮಾಡಿಸುತ್ತಿಲ್ಲ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿಸುತ್ತಿಲ್ಲ. ಸಚಿವರು ಜಿಲ್ಲೆಗೆ ಅತಿಥಿಯಾದಂತಾಗಿದ್ದಾರೆ ಎಂದು ಟೀಕಿಸಿದರು.
ಬರದಲ್ಲಿ ಜನರ ನೋವಿಗೆ ಸ್ಪಂದಿಸುವುದನ್ನು ಬಿಟ್ಟು ಕಾಂಗ್ರೆಸ್ನವರು ರೆಸಾರ್ಟ್​ ಸೇರಿಕೊಂಡಿದ್ದಾರೆ. ಇತ್ತ ಕೇಂದ್ರ ಸರ್ಕಾರ ನೀಡಿದ ಅನುದಾನ ಸರಿಯಾಗಿ ಬಳಸಿಕೊಳ್ಳಲು ಅಗುತ್ತಿಲ್ಲ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು. ಎಂಎಲ್ಸಿ ಬಿ.ಜಿ.ಪಾಟೀಲ್, ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ರಾಜ್ಯ ಸಹ ವಕ್ತಾರ ಶಶೀಲ್ ನಮೋಶಿ, ಮಾಜಿ ಸಚಿವರಾದ ಬಾಬುರಾವ ಚವ್ಹಾಣ್, ಮಾಜಿ ಶಾಸಕ ವಾಲ್ಮೀಕಿ ನಾಯಕ, ಮುಖಂಡರಾದ ಲಿಂಗರಾಜ ಬಿರಾದಾರ, ರಾಜೇಂದ್ರ ಕರೇಕಲ್, ಇಂದಿರಾ ಶಕ್ತಿ, ಶರಣಪ್ಪ ತಳವಾರ, ಬಸವರಾಜ ಇಂಗಿನ್ ಇತರರಿದ್ದರು.

ಆಪರೇಷನ್ ಕಮಲ ಇಲ್ಲ: ಕಾಂಗ್ರೆಸ್ನವರಂತೆ ಅಧಿಕಾರದ ಕುರ್ಚಿಗೆ ಅಂಟಿಕೊಂಡವರು ನಾವಲ್ಲ. ನಮ್ಮದು ಸಿದ್ಧಾಂತದ ಪಕ್ಷ. ಹೀಗಾಗಿ ನಾವು ಆಪರೇಷನ್ ಕಮಲ ಮಾಡಿಲ್ಲ, ಮಾಡುವುದೂ ಇಲ್ಲ. ತಾನಾಗಿಯೇ ಸರ್ಕಾರ ಪತನಗೊಂಡರೆ ನೋಡೋಣ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಹೇಳಿದರು. ದೋಸ್ತಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿಲ್ಲ. ರೆಸಾರ್ಟ್​ನಲ್ಲಿ ಗಲಾಟೆ ಮಾಡಿಕೊಂಡಿರುವ ಕಾಂಗ್ರೆಸ್ ಶಾಸಕರ ವರ್ತನೆ ಸರಿಯಲ್ಲ. ಅವರೇನು ಬಿಜೆಪಿಗೆ ಸೇರುತ್ತಾರಾ ಎಂದಾಗ ಸ್ಪಷ್ಟ ಉತ್ತರ ನೀಡದ ಶ್ರೀರಾಮುಲು, ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಅಭ್ಯಥರ್ಿ ಅಂತಿಮಗೊಳಿಸಿಲ್ಲ, ಎಲ್ಲ ಹಿರಿಯರು ಸೇರಿ ಆಯ್ಕೆ ಮಾಡುತ್ತಾರೆ ಎಂದರು.

ಗೊಂದಲದಲ್ಲಿ ಸಾಲ ಮನ್ನಾ ವಿಚಾರ
ಸೇಡಂ: ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಘೋಷಣೆಗೆ ಸೀಮಿತವಾಗಿದೆ. ಎಲ್ಲವೂ ಗೊಂದಲದ ಗೂಡಾಗಿದೆ ಎಂದು ಮಾಜಿ ಸಚಿವ ಶಾಸಕ ಬಿ.ಶ್ರೀರಾಮುಲು ಟೀಕಿಸಿದರು. ಕೋಡ್ಲಾ ಗ್ರಾಮದ ಏಜಾಜ್ಖಾನ್, ಸಿಂಧನಮಡು ಗ್ರಾಮದ ರೈತ ಬನ್ನಯ್ಯ ಸ್ವಾಮಿ ಹೊಲಗಳಿಗೆ ಭಾನುವಾರ ಭೇಟಿ ನೀಡಿ ಬರ ಸ್ಥಿತಿ ಅಧ್ಯಯನ ನಡೆಸಿದ ಅವರು, ತೊಲಮಾಮಡಿಯಲ್ಲಿ ನರೇಗಾ ಯೋಜನೆಯಡಿ ಬರ ಪರಿಹಾರ ಕಾಮಗಾರಿ ವೀಕ್ಷಿಸಿ ಜನರ ಅಹವಾಲು ಸ್ವೀಕರಿಸಿದರು. ಮುಂಗಾರು, ಹಿಂಗಾರು ಬೆಳೆ ಸಂಪೂರ್ಣ ಹಾಳಾಗಿದ್ದು, ಸ್ಥಿತಿಗತಿಯ ಅಧ್ಯಯನ ವರದಿಯನ್ನು ಬಜೆಟ್ ಆಧಿವೇಶನದಲ್ಲಿ ಮಂಡಿಸಿ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.
ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ, ಬಿ.ಜಿ.ಪಾಟೀಲ್, ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ್ ಮೋತಕಪಲ್ಲಿ, ಜಿಪಂ ಸದಸ್ಯ ಶರಣು ಮೆಡಿಕಲ್, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಸಹಾಯಕ ಕೃಷಿ ನಿರ್ದೇಶಕ ಎ.ವೈ.ಹಂಪಣ್ಣ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ ಇಂಗಿನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪರ್ವತರೆಡ್ಡಿ ಪಾಟೀಲ್, ಶಿವಕುಮಾರ ಪಾಟೀಲ್ ತೆಲ್ಕೂರ (ಜಿಕೆ), ವಿಶ್ವನಾಥ ಪಾಟೀಲ್ ಕುರಕುಂಟಾ, ರಾಜಶೇಖರ ನೀಲಂಗಿ, ಮುಕುಂದ ದೇಶಪಾಂಡೆ, ನಾಗರೆಡ್ಡಿ ದೇಶಮುಖ, ನಾಗಪ್ಪ ಕೊಳ್ಳಿ, ಓಂಪ್ರಕಾಶ ಪಾಟೀಲ್, ವೆಂಕಟಯ್ಯ ಮುಸ್ತಾಜರ್, ನಾಗೇಂದ್ರಪ್ಪ ಸಿಲಾರಕೋಟ, ಡಾ.ಮಧುಸೂದನರೆಡ್ಡಿ ಸಿಲಾರಕೋಟ, ಇತರರಿದ್ದರು.