ಮಮತಾ ಬ್ಯಾನರ್ಜಿ ತಿರುಚಿದ ಫೋಟೋ ಶೇರ್​ ಮಾಡಿ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ಕಾರ್ಯಕರ್ತೆಗೆ ಸುಪ್ರೀಂಕೋರ್ಟ್​ ಜಾಮೀನು

ನವದೆಹಲಿ: ವಿವಾದಾತ್ಮಕವಾಗಿ ತಿರುಚಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿ ಪೊಲೀಸರಿಂದ ಬಂಧನಕ್ಕೊಳ ಗಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾಗೆ ಸುಪ್ರೀಂಕೋರ್ಟ್​ ಜಾಮೀನು ನೀಡಿದೆ.

ನ್ಯೂಯಾರ್ಕ್​ನಲ್ಲಿ ನಡೆದ ಮೆಟ್​ ಗಾಲಾ-2019ರಲ್ಲಿ ವಿಶಿಷ್ಯ ಕೇಶ ವಿನ್ಯಾಸದೊಂದಿಗೆ ಭಾಗವಹಿಸಿ ಸಿಕ್ಕಾಪಟೆ ಟ್ರೋಲ್​ ಆಗಿದ್ದ ಪ್ರಿಯಾಂಕಾ ಚೋಪ್ರಾ ಫೋಟೋದೊಂದಿಗೆ ಮಮತಾ ಬ್ಯಾನರ್ಜಿ ಫೋಟೋ ಎಡಿಟ್​ ಮಾಡಲಾಗಿತ್ತು. ಆ ಕೇಶ ವಿನ್ಯಾಸಕ್ಕೆ ಮಮತಾ ಬ್ಯಾನರ್ಜಿಯವರ ಫೋಟೋ ಸೇರಿಸಲಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಪ್ರಿಯಾಂಕಾ ಕೂಡ ತಮ್ಮ ಫೇಸ್​ಬುಕ್​ನಲ್ಲಿ ಈ ತಿರುಚಿದ ಫೋಟೋ ಶೇರ್​ ಮಾಡಿಕೊಂಡಿದ್ದರು. ಇದರಿಂದ ಅವರ ವಿರುದ್ಧ ದಸ್​ನಗರ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು.

ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇಂದು ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜೀ, ಸಂಜೀವ್​ ಖನ್ನಾ ಅವರನ್ನೊಳಗೊಂಡ ರಜಾಕಾಲೀನ ಪೀಠ ವಿಚಾರಣೆ ನಡೆಸಿ ಪ್ರಿಯಾಂಕಾ ಶರ್ಮಾಗೆ ಜಾಮೀನು ನೀಡಿದೆ.

ನಾವು ಪ್ರಿಯಾಂಕಾ ಅವರಿಗೆ ಜಾಮೀನು ನೀಡುತ್ತೇವೆ. ಪ್ರಿಯಾಂಕಾ ಶರ್ಮಾ ರಾಜಕೀಯ ಪಕ್ಷವೊಂದರ ಸದಸ್ಯೆ. ಚುನಾವಣೆ ನಡೆಯುತ್ತಿರುವುದರಿಂದ ಆಕೆ ಕೂಡಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಬಳಿ ಲಿಖಿತವಾಗಿ ಕ್ಷಮೆ ಕೋರಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡುವುದಾಗಿ ಸುಪ್ರೀಂಕೋರ್ಟ್​ ಮೊದಲು ತೀರ್ಪು ನೀಡಿತ್ತು.

ಅದಾದ ಬಳಿಕ ಮತ್ತೆ ಪ್ರಿಯಾಂಕಾ ಶರ್ಮಾ ಅವರ ಪರ ವಕೀಲರಾದ ಎನ್​.ಕೆ.ಕೌಲ್​ ಅವರನ್ನು ವಾಪಸ್​ ಕರೆದು ತನ್ನ ತೀರ್ಪನ್ನು ಬದಲಿಸಿದ್ದಾಗಿ ಹೇಳಿದೆ. ಅಲ್ಲದೆ, ಪ್ರಿಯಾಂಕಾ ಶರ್ಮಾ ಕ್ಷಮೆ ಕೇಳುವುದು ಬೇಡ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿ, ವರದಿ ನೀಡಿದೆ.
ಮಗಳ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಯಿ ರಾಜ್​ಕುಮಾರಿ ಶರ್ಮಾ, ನನಗೆ ಆಗುತ್ತಿರುವ ಸಂತೋಷ ಹೇಳಲು ಸಾಧ್ಯವಾಗುತ್ತಿಲ್ಲ. ಮಗಳು ಹಿಂದಿರುಗುವುದನ್ನೇ ಕಾಯುತ್ತಿದ್ದೆ ಎಂದಿದ್ದಾರೆ.
ಪ್ರಿಯಾಂಕಾ ಶರ್ಮಾ ಫೋಟೋವನ್ನು ಶೇರ್​ ಮಾಡಿದ್ದಾರಷ್ಟೇ, ಅದು ಅವರು ಸೃಷ್ಟಿ ಮಾಡಿದ್ದಲ್ಲ ಎಂದು ಕೋರ್ಟ್​ನಲ್ಲಿ ವಾದಿಸಿದ್ದ ವಕೀಲ ಎನ್​.ಕೆ.ಕೌಲ್​ ತೀರ್ಪನ್ನು ಸ್ವಾಗತಿಸಿದ್ದಾರೆ. ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.