More

    ಅವಕಾಶ ಕೊಟ್ಟರೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ: ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿಕೆ

    ಮಂಡ್ಯ: ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಪ್ರಸ್ತುತ ಬಿಜೆಪಿ ಸದೃಢವಾಗಿದ್ದು, ಅದ್ಭುತ ಶಕ್ತಿ ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಮತಗಳು ಬಂದಿದೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಸ್ಪರ್ಧಿಸಲು ಅವಕಾಶ ಕೊಟ್ಟರೆ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿದರು.
    ನಗರದ ತಾವರೆಗೆರೆಯ ರೈಸ್‌ಮಿಲ್ ಆವರಣದಲ್ಲಿ ಡಾ.ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ನನ್ನ ಜನ, ಕಾರ್ಯಕರ್ತರು ನನ್ನನ್ನು ಗುರುತಿಸಿದ್ದಾರೆ. ನನಗೆ ಟಿಕೆಟ್ ಕೊಡಲು ಅವರೆಲ್ಲರು ಒತ್ತಾಯಿಸಿದ್ದು, ನನಗೆ ಅಧಿಕಾರದ ಆಸೆ ಇಲ್ಲ. ಕಾರ್ಯಕರ್ತರು ತೋರಿದ ಪ್ರೀತಿಯ ಅಭಿಮಾನ ನನಗೆ ಸಂತೋಷ ತಂದಿದೆ ಎಂದು ಭಾವುಕರಾದರು.
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಹೆಚ್ಚು ಮತ ಪಡೆಯುವ ಮೂಲಕ ಬಿಜೆಪಿ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದರೆ ನಮ್ಮನ್ನು ಕಡೆಗಣಿಸುವ ಕೆಲಸ ಆಗಬಾರದು. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿದ್ದೇವೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರದ ನಾಯಕರು ಮಂಡ್ಯ ಜಿಲ್ಲೆಯನ್ನು ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.
    ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ ಮಾತನಾಡಿ, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇಡೀ ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದು, ಮಂಡ್ಯ ಕ್ಷೇತ್ರ ಕೂಡ ಬಿಜೆಪಿ ಗೆಲುವಿಗೆ ಪೂರಕವಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಗಳಿದ್ದು, ಅದರಲ್ಲಿಯೂ ಸಜ್ಜನ ರಾಜಕಾರಣಿಯಾಗಿರುವ ಡಾ.ಸಿದ್ದರಾಮಯ್ಯ ಅವರು 2018ರ ಲೋಕಸಭಾ ಉಪಚುನಾವಣೆಯಲ್ಲಿ 2 ಲಕ್ಷದ 50 ಸಾವಿರ ಮತ ಪಡೆದಿರುವುದು ಇತಿಹಾಸ. ರಾಜ್ಯ ನಾಯಕರಿಗೆ ಇದನ್ನು ತಿಳಿಸಬೇಕಿದೆ. ಡಾ.ಸಿದ್ದರಾಮಯ್ಯರೇ ಮಂಡ್ಯ ಬಿಜೆಪಿ ಅಭ್ಯರ್ಥಿ ಆಗಬೇಕು, ಅವರು ಗೆದ್ದು ಬರಬೇಕು. ಜೆಡಿಎಸ್ ಜತೆ ಹೊಂದಾಣಿಕೆಗೆ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ. ಆದರೆ ಮತದಾರರ ಆಲೋಚನೆ ಏನಿದೆ ಎಂಬುದನ್ನ ಹೈಕಮಾಂಡ್ ಗ್ರಹಿಸಬೇಕಿದೆ ಎಂದರು.
    ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಡಾ.ಸಿದ್ದರಾಮಯ್ಯ ಅವರು ತ್ಯಾಗಿ. ಎಲ್ಲ ಪಕ್ಷದಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ನರೇಂದ್ರ ಮೋದಿ ಅವರ ನಾಯಕತ್ವ ಒಪ್ಪಿ ಬಿಜೆಪಿ ಸೇರಿದರು. 6 ತಿಂಗಳ ಅವಧಿಗೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ಪರವಾಗಿ ಅತಿ ಹೆಚ್ಚು ಮತಗಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಪರ ನಾವಿರುತ್ತೇವೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಚುನಾವಣೆ ಟಿಕೆಟ್ ಕೊಟ್ಟರೆ ಸಂತೋಷ ಎಂದರು.
    ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಮುಖಂಡರಾದ ವಿದ್ಯಾನಾಗೇಂದ್ರ, ಯಮದೂರು ಸಿದ್ದರಾಜು, ಎಚ್.ಪಿ.ಮಹೇಶ್, ರೂಪಾ, ಶೀಳನೆರೆ ಅಂಬರೀಶ್, ವಸಂತ್‌ಕುಮಾರ್, ಪ.ನಾ. ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts