ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮಾಚರಣೆ ಸಿದ್ಧತೆಯಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಇಂದು ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದು, ಆತ ವಿಜಯೋತ್ಸವದ ಸಿದ್ಧತೆಯಲ್ಲಿ ನಿರತನಾಗಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಇಂದು ಮಧ್ಯಾಹ್ನ ಬರ್ಡಾನ್​ನಲ್ಲಿ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಸುಶೀಲ್​ ಮಂಡೋಲ್ (52)​ ಎಂಬುವರು ಸಂಭ್ರಮಾಚರಣೆಗಾಗಿ ಬಿಜೆಪಿ ಬಾವುಟಗಳನ್ನೆಲ್ಲ ಸೇರಿಸುತ್ತಿರುವಾಗ ಅವರನ್ನು ಮಾರಕಾಸ್ತ್ರದಿಂದ ಹತ್ಯೆಗೈಯ್ಯಲಾಗಿದೆ ಎನ್ನಲಾಗಿದೆ.

ಈಗಾಗಲೇ ಹಲವು ಸಂಘರ್ಷಗಳಲ್ಲಿ 54 ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದು ಅವರ ಕುಟುಂಬದವರಿಗೆಲ್ಲ ಇಂದು ನಡೆಯಲಿರುವ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನವನ್ನೂ ನೀಡಲಾಗಿದೆ.

ಚುನಾವಣೆ ಪೂರ್ವ ಹಾಗೂ ನಂತರದ ದಿನಗಳಲ್ಲಿ ಕೂಡ ಪಶ್ಚಿಮ ಬಂಗಾಳದಲ್ಲಿ ಅನೇಕ ಬಾರಿ ಹಿಂಸಾಚಾರ ನಡೆದಿದೆ. ಮೂರು ದಿನಗಳ ಹಿಂದಷ್ಟೇ ಬಿಜೆಪಿ ಮುಖಂಡ ನಾರ್ತ್ 24 ಪರಗಣ ಜಿಲ್ಲೆ ಭಾಟ್‍ಪಾಪಾದಲ್ಲಿ ಚಂದನ್ ಸಾವು(36) ಎಂಬ ಬಿಜೆಪಿ ಸ್ಥಳೀಯ ಮುಖಂಡ ಹತ್ಯೆಯಾಗಿದ್ದರು.