ರಾಮ ಮಂದಿರ ನಿರ್ಮಿಸದಿದ್ದರೆ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ: ಉದ್ಧವ್‌ ಠಾಕ್ರೆ

ಅಯೋಧ್ಯೆ: ಕೇಂದ್ರ ಸರ್ಕಾರವು ಈಗಲೇ ರಾಮ ಮಂದಿರ ನಿರ್ಮಾಣ ಕಾರ್ಯ ಕೈಗೊಳ್ಳದಿದ್ದರೆ ಅವರು ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಅಯೋಧ್ಯೆಯ ರಾಮ್‌ ಲಲ್ಲಾ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಏನನ್ನಾದರೂ ಮಾಡಬಹುದು. ತ್ರಿವಳಿ ತಲಾಕ್​, ನೋಟು ಅಮಾನ್ಯೀಕರಣ ಮಾಡಿರುವಂತಹ ಸರ್ಕಾರ ಇದಕ್ಕೆಲ್ಲ ನ್ಯಾಯಾಲಯಕ್ಕೆ ಹೋಗಿರಲಿಲ್ಲ. ಹಾಗಾಗಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗದಿದ್ದರೆ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಮ್‌ ಲಲ್ಲಾ ದೇಗುಲಕ್ಕೆ ಭೇಟಿ ನೀಡಿದ ವೇಳೆ ಅಲ್ಲಿ ನಿಯೋಜಿಸಲಾಗಿದ್ದ ಭದ್ರತೆಯನ್ನು ನೋಡಿ ಬೇಸರಗೊಂಡ ಅವರು, ನನ್ನ ಅಯೋಧ್ಯೆ ಭೇಟಿಯ ಹಿಂದೆ ಯಾವುದೇ ಹಿಡನ್‌ ಅಜೆಂಡಾಗಳಿಲ್ಲ. ಇದನ್ನು ಸುಖಾಸುಮ್ಮನೆ 2019ರ ಸಾರ್ವತ್ರಿಕ ಚುನಾವಣೆಗೆ ತಳಕುಹಾಕಲಾಗುತ್ತಿದೆ ಎಂದರು.

ಅಯೋಧ್ಯೆ ವಿಚಾರವು ನ್ಯಾಯಾಲಯದಲ್ಲಿ ಬಾಕಿ ಇದೆ. ಹಾಗಾಗಿ ಈ ವಿಚಾರವನ್ನು ಚುನಾವಣೆ ಪ್ರಚಾರಕ್ಕೆ ಬಿಜೆಪಿ ಬಳಸಿಕೊಳ್ಳಬಾರದು. ರಾಮ ಮಂದಿರ ನಿರ್ಮಾಣದ ಭರವಸೆಯು ಮತ್ತೊಂದು ಸುಳ್ಳು ಎಂಬುದನ್ನು ಜನರಿಗೆ ತಿಳಿಸಿ. ಬಿಜೆಪಿಯವರು ಹಿಂದುಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು.

ಅಯೋಧ್ಯೆಗೆ ಭೇಟಿ ನೀಡುವಲ್ಲಿ ಯಶಸ್ವಿಯಾಗಿರುವ ಉದ್ಧವ್‌, ತನ್ನ ಬೆಂಬಲಿಗರಿಗೆ ಮತ್ತು ಉತ್ತರಪ್ರದೇಶ ರಾಜ್ಯ ಸರ್ಕಾರಕ್ಕೆ ತಮಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಈ ಮೊದಲು ಬಾಬರಿ ಮಸೀದಿ ನಿಂತಿದ್ದ ಅದೇ ಜಾಗದಲ್ಲಿಯೇ ರಾಮ ಮಂದಿರ ತಲೆಯೆತ್ತಬೇಕೆಂದು ಶಿವಸೇನೆ ಬಯಸಿದೆ. ನಿನ್ನೆಯಷ್ಟೇ ಸಾಧು ಸಂತರು ನನ್ನನ್ನು ಹರಸಿದ್ದಾರೆ. ಹಿಡನ್‌ ಅಜೆಂಡಾದೊಂದಿಗೆ ನಾನು ಅಯೋಧ್ಯೆಗೆ ಬಂದಿಲ್ಲ. ಬದಲಿಗೆ ವಿಶ್ವಾದ್ಯಂತ ಇರುವ ಭಾರತೀಯರು ಮತ್ತು ಹಿಂದುಗಳ ಭಾವನೆಗಳನ್ನು ವ್ಯಕ್ತಪಡಿಸಲು ಬಂದಿದ್ದೇನೆ ಎಂದರು.

ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್‌ ಧರ್ಮ ಸಂಸದ್‌ ಏರ್ಪಡಿಸಿದ್ದರೆ, ಇತ್ತ ಶಿವಸೇನೆ ಕೂಡ ಶನಿವಾರದಿಂದಲೇ ಅಯೋಧ್ಯೆಯಲ್ಲಿ ಬೀಡುಬಿಟ್ಟು ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎನ್ನುವಂತೆ ಬಲ ಪ್ರದರ್ಶನ ಮಾಡುತ್ತಿದೆ. (ಏಜೆನ್ಸೀಸ್)

ಅಯೋಧ್ಯೆಯತ್ತ ಭಕ್ತಸಾಗರ