ಅವರಪ್ಪನಾಣೆ ಬಿಜೆಪಿ ಅಧಿಕಾರಕ್ಕೆ ಬರಲ್ಲ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ಅವರಪ್ಪನಾಣೆ’ ಈಗ ಲೋಕಸಭೆಗೂ ಎಂಟ್ರಿ ಕೊಟ್ಟಿದೆ. ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ವಿಸೃ್ತತ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಪುಣ್ಯಾತ್ಮ ಅಲ್ಲ ದುರಾತ್ಮ. ಯಡಿಯೂರಪ್ಪ ರೈತನ ಮಗನಲ್ಲ, ಡೋಂಗಿ ರೈತನಾಯಕ. ಅಲ್ಲದೆ, ಅವರಪ್ಪನಾಣೆಗೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಡೋಂಗಿಗಳಾದ ಯಡಿಯೂರಪ್ಪ, ಮೋದಿ ಬಣ್ಣ ಬಯಲಾಗಬೇಕು. ಮಾತೆತ್ತಿದರೆ ಮೋದಿ ತನ್ನನ್ನು ತಾನು ಚೌಕಿದಾರ ಎಂದು ಕರೆದುಕೊಳ್ಳುತ್ತಾರೆ, ಆತ ಚೌಕಿದಾರ್ ಅಲ್ಲ ಭ್ರಷ್ಟ್ಟಾಚಾರದ ಭಾಗಿದಾರ್. ಐದು ಎಕರೆಗೆ ವರ್ಷಕ್ಕೆ ಆರು ಸಾವಿರ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನ ಇದನ್ನೆಲ್ಲ ನಂಬಲ್ಲ. ಅವರಪ್ಪನಾಣೆ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ 150 ಸ್ಥಾನ ಗೆದ್ದು ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಚಿತ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದರು. ಕೊನೆಗೆ ಬಿಎಸ್​ವೈ 3 ದಿನಕ್ಕೆ ಮುಖ್ಯಮಂತ್ರಿಯಾದರೆ, ಕುಮಾರಸ್ವಾಮಿ ಮೈತ್ರಿ ಪಕ್ಷದ ಮುಖ್ಯಮಂತ್ರಿ ಆಗಿರುವುದನ್ನು ಸ್ಮರಿಸಬಹುದು.