ಶಬರಿಮಲೆ ವಿಷಯದಲ್ಲೇ ಚುನಾವಣೆ ಎದುರಿಸುತ್ತೇವೆಂದು ಕೇರಳ ಬಿಜೆಪಿ ಪಟ್ಟು

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಶಬರಿಮಲೆ ವಿಷಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ಕೇರಳ ರಾಜ್ಯ ಚುನಾವಣಾ ಆಯೋಗ ಕಡಿವಾಣ ಹಾಕಿರುವುದನ್ನು ಬಿಜೆಪಿ ವಿರೋಧಿಸಿದೆ.

ಚುನಾವಣೆಯಲ್ಲಿ ಶಬರಿಮಲೆ ವಿಷಯವನ್ನೇ ಪಕ್ಷ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಬಳಸುವುದಾಗಿ ಬಿಜೆಪಿಯ ಹಿರಿಯ ಮುಖಂಡ ಕುಮ್ಮನಂ ರಾಜಶೇಖರನ್ ಹಾಗೂ ಕೆ.ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಮತೀಯ ಭಾವನೆ ಕೆರಳಿಸುವ ಯಾ ಮತೀಯ ಧ್ರುವೀಕರಣ ನಡೆಸುವುದು ತಪ್ಪು. ಆದರೆ ಆರಾಧನಾ ಸ್ವಾತಂತ್ರೃ ಹಾಗೂ ಅಭಿಪ್ರಾಯ ಸ್ವಾತಂತ್ರೃಕ್ಕೆ ಧಕ್ಕೆ ತಂದೊಡ್ಡುವ ಎಡರಂಗ ಸರ್ಕಾರದ ತೀರ್ಮಾನದ ಬಗ್ಗೆ ಜನತೆಗೆ ಮನವರಿಕೆ ಮಾಡಲಾಗುವುದು. ರಾಜ್ಯ ಚುನಾವಣಾ ಆಯುಕ್ತ, ಕೇರಳದ ಎಡರಂಗ ಸರ್ಕಾರ ನೇಮಿಸಿದ ಅಧಿಕಾರಿಯಾಗಿದ್ದು, ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಲಾಗುವುದು. ತೀರ್ಮಾನ ಕೈಗೊಳ್ಳಬೇಕಾದುದು ಕೇಂದ್ರ ಚುನಾವಣಾ ಆಯೋಗವಾಗಿದೆ.

ಶಬರಿಮಲೆ ಸೇರಿದಂತೆ ಇತರ ವಿಷಯಗಳನ್ನು ಚುನಾವಣಾ ಪ್ರಚಾರ ವಿಷಯವನ್ನಾಗಿಸಲು ಎಲ್ಲ ರಾಜಕೀಯ ಪಕ್ಷಗಳಿಗೂ ಹಕ್ಕು ಇದೆ. ಶಬರಿಮಲೆಯಲ್ಲಿ ಆಚಾರ, ಅನುಷ್ಠಾನ ಉಲ್ಲಂಘಿಸುವಲ್ಲಿ ಸರ್ಕಾರ ತೋರಿದ ತಂತ್ರದ ಬಗ್ಗೆ ಜನರಿಗೆ ಮಾಹಿತಿ ನೀಡಬಾರದೆಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಮುಖಂಡರು ತಿಳಿಸಿದ್ದಾರೆ.