ಖರ್ಗೆಗೆ ಪಾಠ ಕಲಿಸಲು ವೀರಶೈವ ಲಿಂಗಾಯತ ಸಮಾವೇಶ ನಿರ್ಣಯ

ಕಲಬುರಗಿ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಅಖಾಡಕ್ಕಿಳಿದಿರುವ ತಮ್ಮನ್ನು ಗೆಲ್ಲಿಸಬೇಕೆಂದು ಡಾ.ಉಮೇಶ ಜಾಧವ್ ವಿಶಾಲ ವೇದಿಕೆಯಲ್ಲಿ ದೀರ್ಘದಂಡ ನಮಸ್ಕಾರ ಹಾಕಿದ್ದು ಗಮನ ಸೆಳೆಯಿತು.
ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದ ತೀರ್ಥ ಸಭಾ ಮಂಟಪದಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ತಮ್ಮನ್ನು ಗೆಲ್ಲಿಸಿ ಸೇವೆಗೆ ಒಂದು ಅವಕಾಶ ಮಾಡಿಕೊಡಿ ಎಂದು ಡಾ.ಜಾಧವ್ ವಿಶಾಲ ವೇದಿಕೆಯಲ್ಲಿ ದೀರ್ಘದಂಡ ನಮಸ್ಕಾರ ಹಾಕಿದರು. ಈ ಪ್ರಸಂಗಕ್ಕೆ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ ಇತರರು ಸಾಕ್ಷಿಯಾದರು.
ಸಮಾವೇಶ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ವೈ, ಸಮಾಜದಲ್ಲಿ ಇದೇ ಒಗ್ಗಟ್ಟು ಹತ್ತು ತಿಂಗಳ ಹಿಂದೆ ಪ್ರದರ್ಶಿಸಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತಿತ್ತು ಎಂದರು.
ಹಿಂದುಳಿದ ವರ್ಗದವರನ್ನು ಪ್ರಧಾನಿ ಹಾಗೂ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಹಿಂದುಳಿದವರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಟ್ಟಿಲ್ಲ. ಖರ್ಗೆ ಅವರೇ, ಯಾವುದು ಹಿಂದುಳಿದ ಪರ ಪಕ್ಷ ಎಂಬುದನ್ನು ಯೋಚಿಸಿ ಎಂದು ಖಾರವಾಗಿ ಪ್ರಶ್ನಿಸಿದರು.
ದೇಶದ ಸ್ವಾತಂತ್ರೃ ಹೋರಾಟದಲ್ಲಿ ಬಿಜೆಪಿ, ಜನಸಂಘದ ಮುಖಂಡರು ಹೋರಾಡಿಲ್ಲ ಎನ್ನುತ್ತಿರುವ ಡಾ.ಖರ್ಗೆ ಇತಿಹಾಸದ ಬಗ್ಗೆ ತಿಳಿದುಕೊಳ್ಳಲಿ. ಶಾಮಪ್ರಸಾದ್ ಮುಖರ್ಜಿ ಮೊದಲಾದವರು ಬಲಿದಾನ ನೀಡಿದ್ದಾರೆ. ಸ್ವಾತಂತ್ರೃದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಅಂದು ಗಾಂಧೀಜಿ ಕಂಡ ಕಾಂಗ್ರೆಸ್ ಮುಕ್ತ ಭಾರತದ ಕನಸು ಇಂದು ಪ್ರಧಾನಿ ಮೋದಿ ನನಸು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ನಾಯಕರ ಅಡ್ರೆಸ್ ಸಿಗಲ್ಲ ಎಂದು ಲೇವಡಿ ಮಾಡಿದರು.
ಮಗನನ್ನು ಮಂತ್ರಿಯಾಗಿ ಮಾಡುವ ಏಕೈಕ ಉದ್ದೇಶದಿಂದ ಪಕ್ಷದ ಹಿರಿಯ ಮುಖಂಡರನ್ನು ಹೊರಹಾಕಿದ ಖರ್ಗೆ ಇಂದು ಸೋಲಿನ ಭೀತಿಯಲ್ಲಿದ್ದಾರೆ. ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ವೀರಶೈವ ಲಿಂಗಾಯತ ಒಂದೇ ಎಂಬ ಹೊಸ ನಾಟಕ ಆರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನವರು ಮಾಡಿದ್ದ 54 ಲಕ್ಷ ಕೋಟಿ ರೂ. ಸಾಲದಿಂದ ಭಾರತವನ್ನು ಮುಕ್ತಗೊಳಿಸಿದ ಮೋದಿ, ಹೊರದೇಶಕ್ಕೆ ಸಾಲ ನೀಡುವಂಥ ಶಕ್ತಿ ತಂದುಕೊಟ್ಟಿದ್ದಾರೆ. ಐದು ವರ್ಷದಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶ ಸೇವೆ ಸಲ್ಲಿಸಿದ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮಾತು ನಿಮ್ಮವರೇ(ಕಾಂಗ್ರೆಸ್) ಆದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ ಎಂದರು.

ವೀರಶೈವ ಮಹಾಸಭಾ ಶಾಮನೂರು- ಖಂಡ್ರೆ ಸ್ವತ್ತು: ವೀರಶೈವ ಮಹಾಸಭಾ ಶಾಮನೂರು ಶಿವಶಂಕರಪ್ಪ ಹಾಗೂ ಖಂಡ್ರೆ ಮನೆತನದ ಸ್ವತ್ತಾಗಿದೆ. ಅವರು ಬಿಟ್ಟರೆ ಯಾರೂ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದರು. ಏನೇ ಆಗಲಿ, ಖರ್ಗೆ ಕೊರಳಿಗೆ ಕೇಸರಿ ಶಾಲು ಹಾಕಿಸಿದರಲ್ಲ ವೀರಶೈವರು ಸಾಕು. ಅವರ 50 ವರ್ಷದ ರಾಜಕೀಯ ಜೀವನದಲ್ಲಿ ಕೇಸರಿ ಅಂದರೆ ಕೆಂಡಕಾರುತ್ತಿದ್ದರು. ಈಗ ಕೇಸರಿ ಶಾಲು ಧರಿಸಿದ್ದಾರೆ ಎಂದರೆ ಪರಿವರ್ತನೆ ಸಂಕೇತ ಅಲ್ಲವೇ? ಹಿಂದು ದೇವರು ಸಹ ನೆನಪಾಗುತ್ತಿದ್ದಾರೆಯೇ ಖರ್ಗೆ ಜೀ ಎಂದು ಪ್ರಶ್ನಿಸಿದರು.

ಮೇಲ್ವರ್ಗದಲ್ಲೂ ಬಡವರಿದ್ದಾರೆ ಎಂಬುದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಶೇ.10 ಮೀಸಲಾತಿ ನೀಡಿದ್ದಾರೆ. ಮೋದಿಯವರ ಇಂಥ ಜನಪರ ಆಡಳಿತ ಸಹಿಸಿಕೊಳ್ಳಲಾಗದೆ ಕಾಂಗ್ರೆಸ್ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
| ದತ್ತಾತ್ರೇಯ ಪಾಟೀಲ್ ರೇವೂರ ಶಾಸಕ

ಬಿಜೆಪಿ ಗುರುತಿನ ಬಟನ್ ಮೇಳೆ ಟಿಂವ್ ಅಂತ ಒತ್ತಿದ್ರೆ ಖರ್ಗೆ ಟೊಂಯ್ ಅಂತಾರೆ. ಧರ್ಮ ಒಡೆಯುವ ಕೆಲಸ ಮಾಡಿದ ಕಾಂಗ್ರೆಸ್ಗೆ ವೀರಶೈವ ಲಿಂಗಾಯತ ಮತದಾರರು ತಕ್ಕ ಪಾಠ ಕಲಿಸಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜಾಧವ್ ಅವರನ್ನು ಬಹುಮತದಿಂದ ಗೆಲ್ಲಿಸಿ ಸಂಸತ್ಗೆ ಕಳಿಸಬೇಕು.
| ಮಾಲೀಕಯ್ಯ ಗುತ್ತೇದಾರ್ ಮಾಜಿ ಸಚಿವ