ವಿಜಯದಶಮಿ ಬಳಿಕ ವಿಜಯಯಾತ್ರೆ

ಬೆಂಗಳೂರು: ವಿಧಾನಸಭಾ ಚುನಾವಣೆ ಗುಂಗಿನಲ್ಲೇ ಇದ್ದು ಲೋಕಸಭಾ ತಯಾರಿಯತ್ತ ಹೆಚ್ಚು ಗಮನ ನೀಡದ ರಾಜ್ಯ ಬಿಜೆಪಿ, ವಿಜಯದಶಮಿ ನಂತರ ಪೂರ್ಣಪ್ರಮಾಣದ ತಯಾರಿಗೆ ಚಾಲನೆ ನೀಡಲು ನಿರ್ಧರಿಸಿದೆ. ಮತ್ತಷ್ಟು ವಿಳಂಬ ಮಾಡಿದರೆ ಪ್ರಮುಖ ಚುನಾವಣೆಯಲ್ಲಿ ಹಿನ್ನಡೆ ಆಗಬಹುದೆಂಬ ವರಿಷ್ಠರ ಸೂಚನೆ ಗಮನಿಸಿ ಮುಂದೆ ನಡೆದಿರುವ ಬಿಜೆಪಿ, ಎಲ್ಲ ಮೋರ್ಚಾಗಳ ಪದಾಧಿಕಾರಿಗಳೂ ಒಳಗೊಂಡಂತೆ ಇಡೀ ಸಂಘಟನೆಯಲ್ಲಿ ಚುರುಕು ಮುಟ್ಟಿಸಲು ವಿಜಯದಶಮಿ ನಂತರದ ಮುಹೂರ್ತ ನಿಗದಿಪಡಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅನೇಕ ಸೂಚನೆ ನೀಡಲಾಗಿತ್ತು. ರಾಜ್ಯಗಳಲ್ಲಿ ವಿಶೇಷ ಸಭೆ ನಡೆಸಿ ಯೋಜನೆಗಳ ಜಾರಿಗೆ ತಂಡ ರಚಿಸಲು ತಿಳಿಸಲಾಗಿತ್ತು. ಸೆಪ್ಟೆಂಬರ್​ನಲ್ಲಿ ವಿಶೇಷ ಸಭೆ ನಡೆಯಿತಾದರೂ ಕರ್ನಾಟಕದಲ್ಲಿ ಮಾತ್ರ ಲೋಕಸಭಾ ವಾತಾವರಣ ನಿರ್ವಣವಾಗಲೇ ಇಲ್ಲ.

ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನವಾಗುತ್ತದೆ, ನಮ್ಮ ಸರ್ಕಾರ ಬರುತ್ತದೆ ಎಂಬ ನಾಯಕರು ಹಾಗೂ ಕಾರ್ಯಕರ್ತರ ಮನಸ್ಥಿತಿಯಿಂದಾಗಿ ಲೋಕಸಭಾ ತಯಾರಿ ಟೇಕಾಫ್ ಆಗಿಲ್ಲ. ಚಾಲನೆ ನೀಡುವ ಸಲುವಾಗಿ ಒಮ್ಮೆ ಆಯೋಜಿಸಿದ ಮೂರು ತಂಡಗಳ ರಾಜ್ಯ ಪ್ರವಾಸ ಅರ್ಧಕ್ಕೇ ನಿಂತಿತು. ವಿಶೇಷ ಸಭೆಯಲ್ಲಿ ನೀಡಿದ ಸೂಚನೆ ನಂತರವೂ ಕಾರ್ಯಕರ್ತರನ್ನು ಉತ್ತೇಜಿಸಲು ಸಾಧ್ಯವಾಗಲಿಲ್ಲ. ಅ.8ಕ್ಕೆ ನಿಗದಿಯಾಗಿದ್ದ ಮೋರ್ಚಾ ಪದಾಧಿಕಾರಿಗಳ ಸಬೆಯನ್ನು ಇದೇ ಕಾರಣಕ್ಕೆ ಹಬ್ಬದ ನಂತರಕ್ಕೆ ಮುಂದೂಡಲಾಗಿದೆ. ಒಂದರ ನಂತರ ಮತ್ತೊಂದರಂತೆ ಸರಣಿ ಕಾರ್ಯಕ್ರಮ ಆಯೋಜಿಸಿ ಲೋಕಸಭೆಗೆ ತಯಾರಿ ನಡೆಸಲಾಗುತ್ತದೆ ಎಂದು ರಾಜ್ಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಕ್ರಮಗಳೇನು?

  • ಮೋರ್ಚಾ ಪದಾಧಿಕಾರಿಗಳ ಸಮಾವೇಶ, ಬೂತ್ ಸಮಿತಿ ಮರುರಚನೆ
  • ಪ್ರತಿ ಲೋಕಸಭಾ ಕ್ಷೇತ್ರದಲ್ಲೇ ಸಹ ಉಸ್ತುವಾರಿ, ಉಸ್ತುವಾರಿ ನೇಮಕ
  • ಕೇಂದ್ರ ಹಾಗೂ ರಾಜ್ಯ ನಾಯಕರ ನಿರಂತರ ಪ್ರವಾಸ
  • ರಾಜ್ಯ ಸರ್ಕಾರದ ವಿರುದ್ಧ ರಾಜ್ಯ, ಸ್ಥಳೀಯವಾಗಿ ಆಂದೋಲನಗಳು
  • ಕೇಂದ್ರದ ಸಾಧನೆಗಳ ಪ್ರಚಾರ
  • ಪಕ್ಷದ ಹಿತೈಷಿ, ವಿರೋಧಿಗಳ ಪಟ್ಟಿ ತಯಾರಿಕೆ, ಪೂರ್ಣಾವಧಿ ಕಾರ್ಯಕರ್ತರ ನಿಯೋಜನೆ
  • ಕಾಲ್ ಸೆಂಟರ್ ಮೂಲಕ ಪ್ರಚಾರ, ಜಾಲತಾಣದಲ್ಲಿ ಹೆಚ್ಚು ಸಕ್ರಿಯ