ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಣ್ಣೀರು ಹಾಕಿದ್ದೇಕೆ?

ಆಗಸ್ಟ್ 11ಕ್ಕೆ ಅಧಿಕಾರದ ಮೊದಲ ವರ್ಷ ಪೂರೈಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಿಧಾನವಾಗಿ ಹುದ್ದೆಗೆ ಹೊಂದಿಕೊಳ್ಳುತ್ತಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಆಯ್ದ ಪತ್ರಕರ್ತರಿಗೆ ಏರ್ಪಡಿಸಿದ್ದ ಭೋಜನಕೂಟದಲ್ಲಿ ಮನದಾಳವನ್ನು ಬಿಚ್ಚಿಟ್ಟರು.

| ಕೆ. ರಾಘವ ಶರ್ಮ

ನವದೆಹಲಿ: ವಿಪಕ್ಷಗಳಿಗೆ ಪ್ರಾಸಬದ್ಧವಾದ ವಾಗ್ಬಾಣಗಳಿಂದಲೇ ಚಾಟಿ ಬೀಸುತ್ತಿದ್ದ ವೆಂಕಯ್ಯ ನಾಯ್ಡು ಅವರಿಗೆ ಉಪ ರಾಷ್ಟ್ರಪತಿ ಹುದ್ದೆ ಬಯಸಿ ಬಂದದ್ದೇನಲ್ಲ. 2019ರ ಲೋಕಸಭೆ ಚುನಾವಣೆ ಗೆದ್ದು ಅಧಿಕಾರಕ್ಕೇರಿ, ನಂತರ ರಾಜಕೀಯ ನಿವೃತ್ತಿ ಬಗ್ಗೆ ಯೋಚಿಸೋಣ ಎಂದು ಕೊಂಡಿದ್ದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ‘ನೀವು ಉಪರಾಷ್ಟ್ರಪತಿಯಾಗಬೇಕು’ ಎಂದಾಗ ದಯವಿಟ್ಟು ಬೇಡ’ ಎಂದಿದ್ದರಂತೆ. ಆದರೂ ಜವಾಬ್ದಾರಿ ಒಪ್ಪಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು. ರಾಜಕಾರಣದ ಆರಂಭಿಕ ದಿನದಿಂದಲೂ ಜನರೊಂದಿಗಿದ್ದ ಅವರು ಉಪ ರಾಷ್ಟ್ರಪತಿಯಾಗಿ ಪಾಲಿಸಬೇಕಾದ ಶಿಷ್ಟಾಚಾರಗಳ ಪಟ್ಟಿ ನೋಡಿಯೇ ಸುಸ್ತಾಗಿದ್ದರಂತೆ.

ಸಿಹಿ-ಕಹಿ ಅನುಭವ: ಉಪರಾಷ್ಟ್ರಪತಿ ಹುದ್ದೆ ಸಿಹಿ-ಕಹಿಯ ಅನುಭವ ನೀಡಿದೆ ಎಂದು ಮೊದಲ ಬಾರಿಗೆ ನಿಮ್ಮಲ್ಲಿ ಹೇಳುತ್ತಿದ್ದೇನೆ. ನಾನು ಸದಾ ಮಾತನಾಡುತ್ತಲೇ ಇರುವ ವ್ಯಕ್ತಿ. ಆದರೆ ಉಪರಾಷ್ಟ್ರಪತಿ ಎಂಬ ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ’ಕ್ರಿಯೆಗೆ ಪ್ರತಿಕ್ರಿಯೆ’ ನೀಡುವುದನ್ನೇ ನಿಲ್ಲಿಸ ಬೇಕಾಗಿದೆ. ಆದರೂ ಮೌನವಾಗಿರು ವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ.

ಯಮದೂತರ ಕಾಟ: ಜನ ನನ್ನೊಂದಿಗೆ ಸೆಲ್ಪಿ ತೆಗೆದುಕೊಳ್ಳುವಂತಿಲ್ಲ, ಹತ್ತಿರ ಬರುವಂತಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದೂರದಲ್ಲೇ ಇರಬೇಕು, ಭದ್ರತಾ ಪಡೆಯವರು ಆಚೀಚೆ ಹೋಗಲು ಬಿಡುವುದಿಲ್ಲ. ಅಭಿಮಾನಿಗಳು ಹತ್ತಿರ ಬರಲು ಯತ್ನಿಸಿದರೆ ನನ್ನ ‘ಯಮದೂತರು’ (ಸೆಕ್ಯುರಿಟಿ ಗಾರ್ಡ್) ದೂರ ಸರಿಸಿಬಿಡುತ್ತಾರೆ. ಇದಕ್ಕೆಲ್ಲ ನನ್ನ ಮನಸ್ಸು ಒಪ್ಪುವುದಿಲ್ಲ. ಆದರೇನು ಮಾಡುವುದು ಉಪರಾಷ್ಟ್ರಪತಿಯಾಗಿ ಶಿಷ್ಟಾಚಾರ ಪಾಲಿಸಲೇಬೇಕು.

ಸರ್ದಾರ್ ಪಟೇಲ್ ಹಾಲ್: ಉಪರಾಷ್ಟ್ರಪತಿಯಾಗಿ ಅಧಿಕೃತ ನಿವಾಸಕ್ಕೆ ಬರುತ್ತಿದ್ದಂತೆಯೇ ಬಲಭಾಗದಲ್ಲಿ ಸರ್ದಾರ್ ಪಟೇಲ್ ಹೆಸರಿನ ಕಾನ್ಪರೆನ್ಸ್ ಹಾಲ್ ನಿರ್ಮಾಣ ಮಾಡಿಸಿದೆ. 150 ಆಸನ ಸಾಮರ್ಥ್ಯದ ಈ ಹಾಲ್​ನಲ್ಲಿ ಪುಸ್ತಕ ಬಿಡುಗಡೆ ಸೇರಿ ಸಣ್ಣಪುಟ್ಟ ಕಾರ್ಯಕ್ರಮ ನಡೆಯುತ್ತಿರುತ್ತವೆ. ಖಾಸಗಿ ಹಾಲ್​ಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದರೆ ಸಂಘಟಕರು ಬಾಡಿಗೆ ನೀಡಬೇಕು. ಅಲ್ಲದೆ, ಸಾರ್ವಜನಿಕರಿಗೂ ನನ್ನಿಂದಾಗಿ ಟ್ರಾಫಿಕ್ ಕಿರಿಕಿರಿ. ಹೀಗಾಗಿ ನನ್ನ ಮನೆಯಲ್ಲೇ ಉಚಿತವಾಗಿ ಕಾರ್ಯಕ್ರಮ ನಡೆಸಲಿ ಎಂಬ ಆಶಯ ನನ್ನದು.

ರೈತರನ್ನು ದೂರವಿಡಲಾರೆ: ಉಪ ರಾಷ್ಟ್ರಪತಿ ನಿವಾಸಕ್ಕೆ 5ಕ್ಕಿಂತ ಹೆಚ್ಚು ರೈತರನ್ನೊಳಗೊಂಡ ನಿಯೋಗ ಬರುವಂತಿಲ್ಲ ಎಂದು ಸಿಬ್ಬಂದಿ ಶಿಷ್ಟಾಚಾರದ ಮಾತನ್ನಾಡಿದ್ದಕ್ಕೆ, ’ರೈತರು ನಮ್ಮ ನಿಮ್ಮೆಲ್ಲರ ಹೊಟ್ಟೆ ತುಂಬಿಸು ವವರು. ಅವರಿಗೆ ನಿರ್ಬಂಧ ಹೇರಬೇಡಿ. ಎಷ್ಟೇ ಮಂದಿ ರೈತರು ಬಂದರೂ ಅವರೆಲ್ಲರನ್ನೂ ಮನೆಯೊಳಗೆ ಬಿಡಬೇಕು ಎಂದು ಆದೇಶಿಸಿದ್ದೆ. ಅಲ್ಲಿಂದೀಚೆಗೆ ರೈತರು ಯಾವುದೇ ರಾಜ್ಯದವರಾಗಿರಲಿ, ಅವರಿಗೆ ನನ್ನ ಮನೆಗೆ ಮುಕ್ತ ಪ್ರವೇಶವಿದೆ.

ತರಕಾರಿ ಉದ್ಯಾನ: ಮೌಲಾನಾ ಆಜಾದ್ ರಸ್ತೆಯಲ್ಲಿರುವ ವಿಶಾಲವಾದ ಬಂಗಲೆಯ ಜಮೀನಿನಲ್ಲೇ ತರಕಾರಿ ಉದ್ಯಾನ ನಿರ್ವಿುಸಿದ್ದು, ವಿವಿಧ ತರಕಾರಿಗಳ ಜೈವಿಕ ಕೃಷಿ ನಡೆಸುತ್ತಿದ್ದೇನೆ.

ಕಣ್ಣೀರ ರಹಸ್ಯ

ಒಲ್ಲದ ಮನಸ್ಸಿನಿಂದ ಉಪರಾಷ್ಟ್ರಪತಿ ಹುದ್ದೆ ಒಪ್ಪಿಕೊಂಡಿದ್ದ ವೆಂಕಯ್ಯ ನಾಯ್ಡು, ಬಿಜೆಪಿ ಸಂಸದೀಯ ಮಂಡಳಿ ಕೈಗೊಂಡ ನಿರ್ಧಾರ ಕೇಳುತ್ತಿದ್ದಂತೆಯೇ ಕಣ್ಣೀರು ಹಾಕಿದ್ದರಂತೆ. ಅನೇಕ ವರ್ಷಗಳಿಂದ ಸ್ವಂತ ಮನೆಯಂತಾಗಿದ್ದ ಪಕ್ಷದ ಕಚೇರಿಗೆ ಇನ್ನು ಕಾಲಿಡುವಂತಿಲ್ಲ, ರಾಜಕೀಯ ಮಾಡುವಂತಿಲ್ಲ, ಕಾರ್ಯಕರ್ತರ ಭೇಟಿ ಸಾಧ್ಯವಿಲ್ಲ ಎಂಬುದನ್ನೆಲ್ಲಾ ನೆನೆಸಿಕೊಳ್ಳುತ್ತಿದ್ದಂತೆಯೇ ನಾಯ್ಡು ಕಣ್ಣು ತೇವಗೊಂಡಿತ್ತಂತೆ.