ಸರ್ಜಿಕಲ್​ ಸ್ಟ್ರೈಕ್​ ಬಿಜೆಪಿಯ ಚುನಾವಣಾ ಜಾಹಿರಾತು ಪ್ರಚಾರವೆಂದ ಬಾಲಿವುಡ್​ ನಟಿ ಸ್ವರ ಭಾಸ್ಕರ್​

ನವದೆಹಲಿ: ಭೋಪಾಲ್​ನಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಮಾತನಾಡಿ ಸುದ್ದಿಯಾಗಿದ್ದ ಬಾಲಿವುಡ್​ ನಟಿ ಸ್ವರ ಭಾಸ್ಕರ್​ ಇದೀಗ ಮತ್ತೊಮ್ಮೆ ಬಿಜೆಪಿ ವಿರುದ್ಧ ಧ್ವನಿ ಏರಿಸಿದ್ದಾರೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಾಗೂ ಆಮ್​ ಆದ್ಮಿ ಪಕ್ಷ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಪರ ಚುನಾವಣಾ ಪ್ರಚಾರ ಕೈಗೊಂಡಿರುವ ನಟಿ ಸ್ವರ ಭಾಸ್ಕರ್​, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಬರಬಾರದೆಂದು ತಮ್ಮ ಪ್ರಚಾರದ ಉದ್ದಕ್ಕೂ ಜನರಲ್ಲಿ ಮನವಿ ಮಾಡಿಕೊಳ್ಳುತ್ತಾ ತಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ.

ಯಾವುದೇ ಒಂದು ಪಕ್ಷಕ್ಕಲದೇ ನಿರ್ಧಿಷ್ಟ ಅಭ್ಯರ್ಥಿಗಳಿಗೆ ಮಾತ್ರವೇಕೆ ಪ್ರಚಾರ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವರ, ಪ್ರಚಾರದಲ್ಲಿ ಭಾಗಿಯಾಗುವುದರಿಂದ ನಾನು ಏನನ್ನು ಪಡೆಯುವುದಿಲ್ಲ. ಒಂದು ಒಳ್ಳೆಯ ಉದ್ದೇಶ ಹಾಗೂ ಸಮಸ್ಯೆಗಳ ವಿರುದ್ಧ ಹೋರಾಡುವಂತಹ ಮತ್ತು ಉತ್ತಮ ವ್ಯಕ್ತಿತ್ವವುಳ್ಳ ಅರ್ಹ ವ್ಯಕ್ತಿ ಎಂದು ಭಾವಿಸಿದವರಿಗೆ ನಾನು ಪ್ರಚಾರ ಮಾಡುತ್ತೇನೆ. ಕಳೆದ ಐದು ವರ್ಷಗಳಿಂದ ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಕೆಲವು ಸಂಸ್ಥೆಗಳು ಕೆಲವು ಕೈಗಳ ಅಡಿಯಲ್ಲಿ ಸಿಲುಕಿವೆ. ಇದು ತುಂಬಾ ಅಪಾಯಕಾರಿ ಎಂದು ಹೇಳಿದರು.

ಎನ್​ಡಿಎ ಒಕ್ಕೂಟದ ಕೇಂದ್ರ ಸರ್ಕಾರದಲ್ಲಿ ಗುಂಪು ಹಿಂಸಾಚಾರ ನ್ಯಾಯಸಮ್ಮತವಾಗಿದೆ ಎಂದು ಆರೋಪಿಸಿದ ಸ್ವರ, ಬಿಜೆಪಿಯಿಂದ ಕಣಕ್ಕಿಳಿದಿರುವ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್ ರಾಜಕೀಯ ಹಾಗೂ ಅಪರಾಧದ ಮಿಶ್ರಣವಾಗಿದ್ದಾರೆ. ಅವರು ಭಯೋತ್ಪಾದನೆ ಹಾಗೂ ಕೊಲೆಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ದೂರಿದರು.

ಸೇನಾ ಪಡೆಯನ್ನು ಎನ್​ಡಿಎ ಸರ್ಕಾರ ರಾಜಕೀಯ ಹಿತಾಶಕ್ತಿಗೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾರೆ ಇಂತಹ ಕೆಲಸವನ್ನು ಎಂದೂ ಮಾಡಿಲ್ಲ. ಭಾರತೀಯ ಸೇನೆ ಮಾಡಿರುವ ಸರ್ಜಿಕಲ್​​ ಸ್ಟ್ರೈಕ್​ ಅನ್ನು ಬಿಜೆಪಿ ತನ್ನ ಜಾಹಿರಾತು ಪ್ರಚಾರ ಹಾಗೂ ಸಾರ್ವಜನಿಕ ಪ್ರಚಾರವನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)