ನಾನು, ಡಿಕೆಶಿ ನಿಜವಾದ ಜೋಡೆತ್ತು

ಮಂಡ್ಯ: ಜಿಲ್ಲೆಯ ಜನರ ಭಾವನೆಗೆ ತಲೆಬಾಗಿ ನಿಖಿಲ್‌ನನ್ನು ಕಣಕ್ಕಿಳಿಸಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಸೇರಿದ್ದ ಜನಸ್ತೋಮವನ್ನು ನೋಡಿದರೆ ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ನಗರದ ಕಾವೇರಿ ವನದ ಬಳಿ ನಿಖಿಲ್ ನಾಮಪತ್ರ ಸಲ್ಲಿಸಿದ ಬಳಿಕ ತೆರೆದ ಬಸ್‌ನಲ್ಲಿ ನಿಂತು ಮಾತನಾಡಿದ ಅವರು, ಬಿಜೆಪಿ ನಾಯಕರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಬಿ.ಎಸ್.ಯುಡಿಯೂರಪ್ಪ ಪ್ರಚಾರಕ್ಕೆ ಬರುತ್ತಾರಂತೆ. ಕಳೆದ ಬಜೆಟ್ ಘೋಷಣೆಯಾದಾಗ ಮಂಡ್ಯ ಬಜೆಟ್ ಎಂದು ಟೀಕಿಸಿದ ನೀವು ಯಾವ ನೈತಿಕತೆಯಿಂದ ಮತ ಕೇಳಲು ಬರುತ್ತೀರಿ ಎಂದು ಪ್ರಶ್ನಿಸಿದರು.

ನನ್ನನ್ನು ಮಂಡ್ಯ ಜಿಲ್ಲೆಯ ಸಿಎಂ ಎಂದು ಟೀಕಿಸಿದ್ದರು. ಯಾವುದೇ ಯೋಜನೆ ರೂಪಿಸಿದರೂ, ಮಂಡ್ಯಕ್ಕೆ ಸೀಮಿತವಾಗಿರುತ್ತದೆ ಎಂದು ವ್ಯಂಗ್ಯವಾಡುತ್ತಾರೆ. ಅಂತಹವರನ್ನು ಬೆಂಬಲಿಸಬೇಕೆ ಎಂದರು.

ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಾಗಿ ದೂರು ನೀಡಿದ್ದಾರೆ. ನಾನು ಅಂತಹ ರಾಜಕಾರಣ ಮಾಡಿಲ್ಲ. ಜನರ ಪ್ರೀತಿಯಿಂದ ಅಧಿಕಾರ ಮಾಡುತ್ತಿದ್ದೇನೆ. ಜಿಲ್ಲೆಯ ರೈತ ಆತ್ಮಹತ್ಯೆ ಮಾಡಿಕೊಂಡಾಗ ಮತ್ತು ಬಸ್ ದುರಂತ ಸಂಭವಿಸಿದಾಗ ನಾನು ಆಗಮಿಸಿದ್ದೆ ಎಂದು ಪುನರುಚ್ಚರಿಸಿದ ಸಿಎಂ. ನಾನು, ಡಿಕೆಶಿ ನಿಜವಾದ ಜೋಡೆತ್ತು. ಬೇರೆ ಜೋಡೆತ್ತು ಬಂದು ನೀವು ಬೆಳೆದ ಬೆಳೆಯನ್ನು ತಿಂದು ಹೋಗುತ್ತವೆ. ನಾವು ಇಲ್ಲಿಯೇ ಇರುತ್ತೇವೆ ಎಂದು ಮತ್ತೇ ದರ್ಶನ್, ಯಶ್‌ಗೆ ಟಾಂಗ್ ನೀಡಿದರು.

ಸುಮಲತಾರಿಗೆ ಯಾರೋ ಕೀ ಕೊಟ್ಟಿ ನಿಲ್ಲಿಸಿದ್ದಾರೆ
ಸುಮಲತಾರನ್ನು ಯಾರೋ ಕೀ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ. ಕೀ ಕೊಟ್ಟವರು ಯಾರೆಂದು ನನಗೆ ಗೊತ್ತಿದೆ. ನೀವು ಕೀ ಕೊಡುವ ಮೂಲಕ ನಿಖಿಲ್ ಗೆಲ್ಲಿಸಬೇಕೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಸಹೋದರಿ ಸುಮಲತಾ ಬಂದು ನನ್ನ ಮತ್ತು ಸಿದ್ದರಾಮಯ್ಯನವರ ಜತೆ ಮಾತನಾಡಿದಾಗ ಮೈಸೂರು ಅಥವಾ ಬೆಂಗಳೂರು ಸ್ಪರ್ಧೆ ಮಾಡಿ ಅಂತಾ ಹೇಳಿದೆವು. ಆದರೆ ಅದಕ್ಕೆ ಒಪ್ಪಲಿಲ್ಲ. ಸಿಎಂ ಕುಮಾರಸ್ವಾಮಿ ಎರಡು ತಿಂಗಳ ಹಿಂದೆ ಎಂಎಲ್ಸಿ ಮಾಡಿ, ಸಚಿವ ಸ್ಥಾನ ಕೊಡ್ತೀನಿ ಅಂತಾ ಹೇಳಿದರೂ ಅದಕ್ಕೂ ಒಪ್ಪಲಿಲ್ಲ ಎಂದರು.

ಆವತ್ತು ಮಧ್ಯರಾತ್ರಿಯಲ್ಲಿ ಮಂಡ್ಯಕ್ಕೆ ಅಂಬರೀಷ್ ಬಾಡಿ ತರೋದು ಬೇಡ ಅಂದಿದ್ದರು. ಆದರೆ ಅಂಬರೀಷ್ ಪಾರ್ಥಿವ ಶರೀರ ತಂದು ಜಿಲ್ಲೆಯ ಜನರ ಋಣ ತೀರಿಸಿದ್ದು ಇದೇ ಸಿಎಂ ಕುಮಾರಸ್ವಾಮಿ. ಇದು ಮೋದಿ ಮತ್ತು ರಾಹುಲ್ ಗಾಂಧಿ, ದೇವೇಗೌಡರ ನಡುವೆ ನಡೆಯುತ್ತಿರೋ ಹೋರಾಟ. ಬಿಜೆಪಿ ಕುತಂತ್ರಕ್ಕೆ ಮಂಡ್ಯದಲ್ಲಿ ಯಾವುದೇ ಕಾರಣಕ್ಕೂ ಯಶಸ್ಸು ಸಿಗಲ್ಲ. ಕೋಮುವಾದಿಗಳನ್ನು ದೂರವಿಡಬೇಕು. ನಿಖಿಲ್ಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು.

One Reply to “ನಾನು, ಡಿಕೆಶಿ ನಿಜವಾದ ಜೋಡೆತ್ತು”

Comments are closed.