ರಥಯಾತ್ರೆಗೆ ತಡೆ: ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಬಿಜೆಪಿ ನಿರ್ಧಾರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ’ ರಥಯಾತ್ರೆಗೆ ಕಲ್ಕತ್ತಾ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಬಿಜೆಪಿ ಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದೆ.

ಸುಪ್ರೀಂ ಕೋರ್ಟ್​ನ ರಜಾ ಕಾಲದ ಪೀಠಕ್ಕೆ ಅರ್ಜಿ ಸಲ್ಲಿಸಲು ಬಿಜೆಪಿ ಶನಿವಾರ ತೀರ್ಮಾನ ತೆಗೆದುಕೊಂಡಿದೆ.

ಬಿಜೆಪಿ ಪಶ್ಚಿಮ ಬಂಗಾಳದ ಮೂರು ಪ್ರದೇಶಗಳಿಂದ ರಥಯಾತ್ರೆಯನ್ನು ಆರಂಭಿಸಿ ಕೋಲ್ಕತದಲ್ಲಿ ಮುಕ್ತಾಯಗೊಳಿಸಲು ಯೋಜನೆ ರೂಪಿಸಿತ್ತು. ಆದರೆ, ಮಮತಾ ಬ್ಯಾನರ್ಜಿ ಸರ್ಕಾರ ಯಾತ್ರೆ ನಡೆಸಿದರೆ ರಾಜ್ಯದಲ್ಲಿ ಕೋಮುಗಲಭೆ ನಡೆಯುವ ಸಂಭವವಿದೆ ಎಂದು ಹೇಳಿ ಅನುಮತಿ ನಿರಾಕರಿಸಿತ್ತು.

ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಕಲ್ಕತ್ತಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಗುರುವಾರ ಕೋರ್ಟ್​ನ ಏಕಸದಸ್ಯ ಪೀಠ ಯಾತ್ರೆ ನಡೆಸಲು ಷರತ್ತು ಬದ್ಧ ಒಪ್ಪಿಗೆ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ವಿಭಾಗೀಯ ಪೀಠ ರಥಯಾತ್ರೆಗೆ ಅನುಮತಿ ನೀಡಿದ್ದ ಆದೇಶವನ್ನು ವಜಾಗೊಳಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *