ಬಜೆಟ್ ಅಧಿವೇಶನದಲ್ಲಿ ದೋಸ್ತಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ತಯಾರಿ

ಬೆಂಗಳೂರು: ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್​-ಜೆಡಿಎಸ್​ ನೇತೃತ್ವದ ದೋಸ್ತಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ ಬರದ ಅಸ್ತ್ರ ಪ್ರಯೋಗಿಸಲು ಎಲ್ಲ ತಯಾರಿ ನಡೆಸುತ್ತಿದೆ.

ಜ.31ರೊಳಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ಪ್ರವಾಸ ಕ್ಷೇತ್ರಗಳನ್ನು ತಮ್ಮ ಪಕ್ಷದ ನಾಯಕರಿಗೆ ಹಂಚಿಕೆ ಮಾಡಿದ್ದು, ರಜೆಯನ್ನು ಲೆಕ್ಕಿಸದೆ ಬರ ಅಧ್ಯಯನ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇಂದು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಎಸ್​ವೈ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್​ಗೆ ಹಾಸನ ಹಾಗೂ ಮಂಡ್ಯ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಕೆ.ಎಸ್​. ಈಶ್ವರಪ್ಪಗೆ ಬರ ಅಧ್ಯಯನ ನಡೆಸಲಿದ್ದಾರೆ.

ಸಂಸದ ಜಿ.ಎಂ. ಸಿದ್ದೇಶ್ವರ್​ ಅವರಿಗೆ ಹಾವೇರಿ ಹಾಗೂ ದಾವಣಗೆರೆ ಜವಾಬ್ದಾರಿಯನ್ನು, ಶ್ರೀರಾಮುಲು ಅವರಿಗೆ ಕಲಬುರಗಿ,ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಹೊಣೆಯನ್ನು ನೀಡಲಾಗಿದ್ದು, ಉಸ್ತುವಾರಿ ವಹಿಸಲಾಗಿರುವ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸದ್ಯದ ಪರಿಸ್ಥಿತಿ ಬಗ್ಗೆ ವರದಿಗೆ ಸೂಚನೆ ನೀಡಿದ್ದಾರೆ. ವರದಿ ಆಧರಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಪಾಳಯ ಯೋಜನೆ ರೂಪಿಸಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *