More

  ಎಸ್ಟಿ ಮತ ಭದ್ರತೆಗೆ ಮೀಸಲಾಸ್ತ್ರ ಪ್ರಯೋಗ: ಅಧಿಕೃತ ಪ್ರಚಾರಕ್ಕೆ ಬಿಜೆಪಿ ನಾಂದಿ; ಹರಿದು ಬಂದ ಜನಸಾಗರ

  | ವಿ.ಕೆ.ರವೀಂದ್ರ ಬಳ್ಳಾರಿ

  ರಾಜ್ಯ ರಾಜಕೀಯದ ಶಕ್ತಿ ಕೇಂದ್ರಗಳಲ್ಲೊಂದಾದ ಬಳ್ಳಾರಿಯಲ್ಲಿ ಭಾರತ್ ಜೋಡೊ ಯಾತ್ರೆ ನಡೆಸಿ ಕಾಂಗ್ರೆಸ್ ಬೀಗಿದ್ದರೆ, ಇದಕ್ಕೆ ಪ್ರತ್ಯುತ್ತರವಾಗಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ಎಸ್ಟಿ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನ ಸೇರುವ ಮೂಲಕ ಕಮಲ ಪಾಳಯಕ್ಕೆ ನವಶಕ್ತಿ ದೊರೆತಂತಾಗಿದೆ.

  ಚುನಾವಣೆ ಸಮೀಸುತ್ತಲೇ ಆಡಳಿತ ವಿರೋಧಿ ಅಲೆ ಹಾಗೂ ವಿಪಕ್ಷಗಳ ರಾಜಕೀಯ ಚದುರಂಗದಾಟದ ಎದುರು ಜನಸಂಕಲ್ಪ ಯಾತ್ರೆ ಮೂಲಕ ಮೊದಲ ಹಂತದ ರಕ್ಷಣಾತ್ಮಕ ಆಟ ಆಡಿರುವ ಬಿಜೆಪಿ ನಾಯಕರು, ಎರಡನೇ ಅಸ್ತ್ರವಾಗಿ ಮೀಸಲು ವಿಷಯವನ್ನು ಸಮರ್ಥವಾಗಿ ಬಳಸಿಕೊಂಡರು. ಕ್ಷೇತ್ರ ಮರು ವಿಂಗಡನೆ ಬಳಿಕ ಬಹುದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯತ್ತ ವಾಲಿರುವ ಪರಿಶಿಷ್ಟ ಪಂಗಡ ಸಮುದಾಯ ಮೀಸಲಾತಿ ವಿಷಯದಲ್ಲಿ ಅಂತರ ಕಾಯ್ದುಕೊಳ್ಳಲು ಮುಂದಾಗಿತ್ತು. ಇದರ ಸುಳಿವು ದೊರೆಯುತ್ತಲೇ ನಾಲ್ಕು ದಶಕದಿಂದ ನನೆಗುದಿಗೆ ಬಿದ್ದಿದ್ದ ಎಸ್ಸಿ-ಎಸ್ಟಿ ಮೀಸಲು ಹೆಚ್ಚಳ ವಿಷಯದಲ್ಲಿ ಗಟ್ಟಿ ನಿರ್ಧಾರ ಕೈಗೊಂಡ ಬಿಜೆಪಿ, ಅದನ್ನು ಮತಗಳಾಗಿ ಪರಿವರ್ತಿಸಲು ಹೂಡಿದ ವಿರಾಟ ಸಮಾವೇಶಕ್ಕೆ ಲಕ್ಷಾಂತರ ಜನರನ್ನು ಸೇರಿಸಿ ರಾಜ್ಯ-ರಾಷ್ಟ್ರ ನಾಯಕರು ಬಲ ಪ್ರದರ್ಶನ ಮಾಡಿದರು.

  ಮೀಸಲು ಹೆಚ್ಚಳಕ್ಕೆ ಅವಕಾಶವಿದ್ದರೂ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮಾಡಲಿಲ್ಲ ಎಂಬ ಅಂಶ ಒತ್ತಿ ಹೇಳುವ ಮೂಲಕ ಕೈನಾಯಕರಿಗೆ ಸಮಾವೇಶದ ಮೂಲಕ ಬಿಜೆಪಿ ಪ್ರತ್ಯುತ್ತರ ನೀಡಿತು. ಆದಿವಾಸಿ ದ್ರೌಪದಿ ಮುಮು ಅವರನ್ನು ರಾಷ್ಟ್ರಪತಿ ಮಾಡಿದ್ದು, ಎಸ್ಸಿ-ಎಸ್ಟಿ ನಾಯಕರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ್ದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅರ್ಜುನ ಮುಂಡಾ ಪ್ರಸ್ತಾಪಿಸುವ ಮೂಲಕ ಸಮುದಾಯಕ್ಕೆ ಬಿಜೆಪಿ ಕೊಡುಗೆಯನ್ನು ಬಿಂಬಿಸಿದರು.

  ಕನಕ, ವಾಲ್ಮೀಕಿ ಜಯಂತಿ, ಕಾಗಿನೆಲೆ ಅಭಿವೃದ್ಧಿ, ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ, ಪ್ರತ್ಯೇಕ ಸಚಿವಾಲಯ ರಚನೆ, ಎಸ್ಸಿ-ಎಸ್ಟಿ ಬಜೆಟ್ ಮೊತ್ತ ಹೆಚ್ಚಳ ಮಾಡಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಅಹಿಂದ ವರ್ಗಗಳಿಗೆ ಕಾಂಗ್ರೆಸ್​ಗಿಂತ ಬಿಜೆಪಿ ಅಧಿಕ ಆದ್ಯತೆ ನೀಡಿದೆ ಎಂದು ಸಂದೇಶ ರವಾನಿಸಿದರು. ‘ಸಣ್ಣ ಜಾಗದಲ್ಲಿ ಜನರನ್ನು ಸೇರಿಸಿ ಜನರ ಸುನಾಮಿ ಬಂದಿದೆ ಎಂದು ಬೀಗುವ ಕೈ ನಾಯಕರೇ.. ಇಲ್ಲಿ ನೋಡಿ. ಸುನಾನಿ ಅಪ್ಪ ಬಂದಿದ್ದಾನೆ. ಸಿದ್ರಾಮಣ್ಣ ಇಲ್ಲಿ ಬಂದು ನೋಡು. ನಿಜವಾದ ಅಹಿಂದ ಜನ ಬಂದಿದ್ದಾರೆ. ನಿಮ್ಮ ಸುಳ್ಳು, ಕಪಟ, ರಾಜಕೀಯ ಆಟ ಇನ್ನು ಮುಂದೆ ನಡೆಯೋದಿಲ್ಲ’ ಎಂದು ಸಿಎಂ ಬೊಮ್ಮಾಯಿ ಸಮಾವೇಶದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾದಿಯಾಗಿ ಮಾತನಾಡಿದ ನಾಯಕರೆಲ್ಲರೂ ರಾಮ, ರಾಮ ಸೇತು, ರಾಮಾಯಣ, ಹಿಂದುತ್ವ ಬಗ್ಗೆ ಕಾಂಗ್ರೆಸ್ ಹಾಗೂ ನಾಯಕರ ನಿಲುವು ನೆನಪಿಸಿದರು. ಕೇಸರಿ, ಕುಂಕುಮ ಕಂಡರೆ ಭಯವೆಂಬ ಸಿದ್ದರಾಮಯ್ಯ ಹೇಳಿಕೆ ಪುನರುಚ್ಛರಿಸಿ, ಹಿಂದುತ್ವ ವಿರೋಧಿಗಳೆಂಬ ಸಂದೇಶ ಮತ್ತಷ್ಟು ಬಲವಾಗಿ ದಾಟಿಸಿದರು. ವೀರ ಮದಕರಿ ನಾಯಕ, ಹಲಗಲಿ ಬೇಡರು, ಸುರಪುರ ನಾಯಕ, ಗಂಡುಗಲಿ ಕುಮಾರ ರಾಮ, ಹಕ್ಕಬುಕ್ಕರು, ವಿಜಯ ನಗರ ಸಾಮ್ರಾಜ್ಯ ಹಿಂದುತ್ವದ ಉಳಿವಿಗಾಗಿ ರಚನೆಯಾಯಿತೆಂದು ಹೇಳುವ ಮೂಲಕ ಜನರನ್ನು ಭಾವನಾತ್ಮಕವಾಗಿ ಸೆಳೆದರು. ನಾಯಕರ ಪ್ರತಿ ಮಾತಿಗೂ ಜನರು ಶಿಳ್ಳೆ, ಕೇಕೆ ಹಾಕುವ ಮೂಲಕ ಅವರಲ್ಲಿ ಹುರುಪು ತುಂಬಿದರು.

  ಮಿಷನ್ 150 ಟಾರ್ಗೆಟ್: ಕಲ್ಯಾಣ ಕರ್ನಾಟಕದಲ್ಲಿ ಎಸ್ಟಿ ಮತದಾರರು ಅಧಿಕ ಸಂಖ್ಯೆಯಲ್ಲಿದ್ದ ಕಾರಣ ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದ ಬಿಜೆಪಿ ನಾಯಕರು, 2023ರ ಚುನಾವಣೆಗೆ ಯೋಜಿಸಿರುವ ಮಿಷನ್ 150ಗೆ ಕೈ ಜೋಡಿಸುವಂತೆ ಮತಯಾಚಿಸಿ ಅಧಿಕೃತ ಪ್ರಚಾರ ಆರಂಭಿಸಿದರು. ಜೆ.ಪಿ.ನಡ್ಡಾ ಹಾಗೂ ಇತರ ನಾಯಕರು ಶ್ರೀರಾಮನ ಹೆಸರಿನಲ್ಲಿ ಬಾಣ ಬಿಟ್ಟು ಸಮಾವೇಶಕ್ಕೆ ಚಾಲನೆ ನೀಡುವ ಮೂಲಕ ಅಭ್ಯರ್ಥಿಗಳಿಗೆ ಚುನಾವಣೆ ತಯಾರಿ ನಡೆಸುವಂತೆ ಗ್ರೀನ್ ಸಿಗ್ನಲ್ ನೀಡಿದರು. ಅಖಂಡ ಬಳ್ಳಾರಿಯಲ್ಲಿ 10 ವಿಧಾನಸಭಾ ಕ್ಷೇತ್ರಗಳಿದ್ದು, ಐದರಲ್ಲಿ ಆಧಿಪತ್ಯ ಹೊಂದಿರುವ ಬಿಜೆಪಿ, ಬರುವ ಚುನಾವಣೆಯಲ್ಲಿ ಅಷ್ಟೂ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಮತದಾರಲ್ಲಿ ಕೈ ಮುಗಿದು ಮನವಿ ಮಾಡಿದರು.

  ಪ್ರಧಾನಿ ಮೋದಿ, ಜೆಪಿ ನಡ್ಡಾ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ವಿಕಾಸದತ್ತ ಸಾಗುತ್ತಿದೆ. ಕೇಂದ್ರ ಸರ್ಕಾರ ನಮ್ಮನ್ನು ಗುರುತಿಸಿ ಅವಕಾಶ ನೀಡಿದೆ. ಸಮುದಾಯ ಪರವಾಗಿ ನಾವೆಲ್ಲ ಅವರಿಗೆ ಧನ್ಯವಾದ ತಿಳಿಸಬೇಕು. ಆದಿವಾಸಿಗಳ ಬಗ್ಗೆ ಮೊದಲು ಯೋಚಿಸಿದ್ದು ಬಿಜೆಪಿ. ಕಾಂಗ್ರೆಸ್ ಕಿಂಚಿತ್ತೂ ಯೋಚಿಸಿದ ಪರಿಣಾಮ ಅದು ಅವನತಿಯತ್ತ ಸಾಗುತ್ತಿದೆ. ದೇಶ ಸ್ವತಂತ್ರಗೊಂಡ ದಿನದಿಂದ ಕಾಂಗ್ರೆಸ್​ನವರು ದೇಶ ತೋಡೋ ಮಾಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶ ಜೋಡಿಸುವ ಕೆಲಸ ಮೋದಿ ಮಾಡಿದ್ದಾರೆ.

  | ಅರ್ಜುನ ಮುಂಡಾ ಕೇಂದ್ರ ಸಚಿವ

  ಜನರ ಕಲ್ಯಾಣಕ್ಕೆ ನಾವು ಬದ್ಧ ಎಂದ ನಡ್ಡಾ: ಇಷ್ಟು ವರ್ಷ ದೇಶ ಆಳಿದ ಕಾಂಗ್ರೆಸ್, ಬಹುದೊಡ್ಡ ಸಮುದಾಯವನ್ನು ಕಡೆಗಣಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದ್ರೌಪದಿ ಮುಮು ಅವರನ್ನು ರಾಷ್ಟ್ರಪತಿ ಮಾಡುವ ಮೂಲಕ ಗೌರವ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಅರ್ಜುನ ಮುಂಡಾ ಎರಡು ಬಾರಿ ಸಿಎಂ ಆಗಿದ್ದು, ಸದ್ಯ ಕೇಂದ್ರ ಸಚಿವರಾಗಿದ್ದಾರೆ. ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುತ್ತಿದ್ದೇವೆ. ಸಂವಿಧಾನ ಬದ್ಧವಾದ ಮೀಸಲು ಹೆಚ್ಚಳಕ್ಕೆ ಕಾಂಗ್ರೆಸ್ ಮನಸ್ಸು ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಮೀಸಲು, ಅನುದಾನ ಹೆಚ್ಚಳ ಮಾಡಿ, ವಿಶೇಷ ಯೋಜನೆ ನೀಡಿದ್ದೇವೆ. ಆದಿವಾಸಿ, ದಲಿತ, ಹಿಂದುಳಿದ ಜನರ ಕಲ್ಯಾಣಕ್ಕೆ ಬಿಜೆಪಿ ಮುಂದಾಗಿದೆ. ದೇಶ, ರಾಜ್ಯದ ಕಟ್ಟ ಕಡೆಯ ವ್ಯಕ್ತಿ ಮತ್ತೊಮ್ಮೆ ರಾಜ್ಯ-ಕೇಂದ್ರದಲ್ಲಿ ಬಿಜೆಪಿ ಆಯ್ಕೆಗೆ ಕಾತರನಾಗಿದ್ದಾನೆ ಎಂದರು.

  ಕಾಂಗ್ರೆಸ್​ಗೆ ಪಾಪ ತಟ್ಟುತ್ತದೆ ಎಂದ ಬೊಮ್ಮಾಯಿ: ಎಸ್ಸಿ-ಎಸ್ಟಿಗಳಿಗೆ ಸಂವಿಧಾನಬದ್ಧ ಹಕ್ಕು ನೀಡಿದ್ದೇವೆ. 60 ವರ್ಷ ಕಾಂಗ್ರೆಸ್ ನಿಮಗೆ ಮಾಡಿರುವ ಮೋಸಕ್ಕೆ ತಕ್ಕ ಪಾಠ ಕಲಿಸಲು ನೀವು ಸಂಕಲ್ಪ ಮಾಡಬೇಕಿದೆ. ನೀವು ಮನಸ್ಸು ಮಾಡಿದಲ್ಲಿ ಕಾಂಗ್ರೆಸನ್ನು ಬೇರು ಸಮೇತ ಕಿತ್ತೆಸೆಯಬಹುದು. ನಿಮ್ಮ ಹಾಗೂ ನಮ್ಮ ಸಂಕಲ್ಪ ಒಂದೇ ಆಗುವ ಮೂಲಕ ಇದು ಸಂಕಲ್ಪಗಳ ಸಮಾವೇಶವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಾಸ್ತ್ರ ಪ್ರಯೋಗಿಸಿದರು. ಇಷ್ಟು ವರ್ಷ ನಿಮ್ಮ ಹೆಸರಿನಲ್ಲಿ ರಾಜಕೀಯ ಮಾಡಿದ ಕಾಂಗ್ರೆಸ್ ನಿಮಗಾಗಿ ಏನೂ ಮಾಡಲಿಲ್ಲ. ಬಡತನ ನಿವಾರಿಸಿದರಾ? ಸ್ವಾಭಿಮಾನದ ಬದುಕು ಕೊಟ್ಟರಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಬಹಳ ಬುದ್ಧಿವಂತ. ಅಹಿಂದ ಎಂದು ನಿಮ್ಮನ್ನು ಹಿಂದಿಟ್ಟು ತಾನು ಮುಂದೆ ಹೋದ. ಕುರುಬರಿಗೂ ಅನ್ಯಾಯ ಮಾಡಿದರು. ನೀವೀಗ ಜಾಗೃತರಾಗಿದ್ದೀರಿ. ನಾವು ನಿಮ್ಮೊಂದಿಗಿದ್ದೇವೆ. ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರಿಗೆ ಇಷ್ಟು ವರ್ಷ ಮಾಡಿದ ಪಾಪ ಕಾಂಗ್ರೆಸ್​ಗೆ ತಟ್ಟುತ್ತದೆ. ಪರಿವರ್ತನೆ ಕಾಲ ಬಂದಿದೆ ಎಂದು ಪ್ರಚಾರ ತಂತ್ರ ಉರುಳಿಸಿದರು.

  ಎಸ್ಸಿ-ಎಸ್ಟಿಗೆ ಮೀಸಲು ಹೆಚ್ಚಿಸಿ ನಮ್ಮ ವಿಶ್ವಸಾರ್ಹತೆ ಪ್ರದರ್ಶಿಸಿದ್ದೇವೆ. ಅಂಬೇಡ್ಕರ್ ಹಾಗೂ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸತತ ಅನ್ಯಾಯ ಮಾಡಿದ್ದು ಕಾಂಗ್ರೆಸ್. ಮುಳುಗುವ ಹಡಗಾಗಿರುವ ಕಾಂಗ್ರೆಸ್ ಕೊನೇ ಘಳಿಗೆಯಲ್ಲಿ ಖರ್ಗೆ ಹೆಗಲೇರಿದೆ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದ ನಂತರ ಖರ್ಗೆ, ಪರಮೇಶ್ವರ ಮತ್ತು ಎಸ್ಸಿ-ಎಸ್ಟಿ ನಾಯಕರನ್ನು ರಾಜಕೀಯವಾಗಿ ತುಳಿದರು. ರಾಹುಲ್ ಗಾಂಧಿ ಅಧಿಕಾರಕ್ಕಾಗಿ ದಿಕ್ಕೆಟ್ಟು ಓಡಾಡುತ್ತಿದ್ದರೆ, ಸಿದ್ದರಾಮಯ್ಯ ಕ್ಷೇತ್ರ ಹುಡುಕಾಡುವಂತಾಗಿದೆ.

  | ಪ್ರಲ್ಹಾದ ಜೋಶಿ ಕೇಂದ್ರ ಸಚಿವ

  ನಾನು ಸಿಎಂ ಆಗಿದ್ದಾಗ ನಿಮ್ಮ ಜಿಲ್ಲೆಯ ಸಚಿವರು ಕೇಳಿದ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಈ ಸಮಾವೇಶ ಕಂಡು ಕಾಂಗ್ರೆಸ್ ನಾಯಕರು ಹೆದರಿದ್ದಾರೆ. ಮೀಸಲು ಹೆಚ್ಚಿಸದೆ ಕಾಂಗ್ರೆಸ್​ನವರು ನಿಮಗೆಲ್ಲ ಮೋಸ ಮಾಡಿದ್ದಾರೆ. ಬಹುವರ್ಷದ ಬೇಡಿಕೆ ನಾವು ಈಡೇರಿಸಿದ್ದೇವೆ. ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಸಮುದಾಯ ಜನ ನಮ್ಮ ಬೆಂಬಲಕ್ಕೆ ನಿಲ್ಲಬೇಕು. 150 ಸ್ಥಾನ ಗೆದ್ದು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.

  | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

  ಪ್ರಮುಖಾಂಶ

  • ಬಿಜೆಪಿ ಅಹಿಂದ ಪರ ಎಂಬ ಸಂದೇಶ ರವಾನೆ
  • ವಿಪಕ್ಷಗಳ ಬಲಪ್ರದರ್ಶನಕ್ಕೆ ಪ್ರತ್ಯುತ್ತರ
  • ಬಳ್ಳಾರಿಯಲ್ಲಿನ ಕೈ ರಾಜಕೀಯ ಗಟ್ಟಿ ಬೇರು ಸಡಿಲಿಕೆ ತಂತ್ರ
  • ಸಾಂಪ್ರದಾಯಿಕ ಎಸ್ಟಿ ಮತಗಳ ಭದ್ರತೆ ಮುಂದುವರಿಕೆ
  • ಮಿಷನ್ 150 ಮಂತ್ರ ಪುನರುಚ್ಛಾರ
  • 2023ರ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ

  ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..

  23 ವರ್ಷಗಳ ಕಾಲ ನಾಪತ್ತೆಯಾಗಿದ್ದ ತಂದೆ; ಸತ್ತು ಹೋಗಿದ್ದರೆಂದು ಭಾವಿಸಿದ್ದ ಮಕ್ಕಳಿಗೆ ಕೊನೆಗೂ ಸಿಕ್ಕ ಅಪ್ಪ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts