More

    ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಗೋಸುಂಬೆ ರಾಜಕಾರಣ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕೆ

    ಮಂಡ್ಯ: ಮೇಕೆದಾಟು ಅಣೆಕಟ್ಟೆ ಕಟ್ಟುತ್ತೇವೆಂದು ಪಾದಯಾತ್ರೆ ಮಾಡಿದ ಕಾಂಗ್ರೆಸ್ ನಾಯಕರು ಇದೀಗ ಕೆಆರ್‌ಎಸ್ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರನ್ನು ತಮಿಳುನಾಡಿಗೆ ಬಸಿದು ಕೊಡುತ್ತಿದೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಗೋಸುಂಬೆ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಕಿಡಿಕಾರಿದ್ದಾರೆ.
    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾನು ತಪ್ಪು ಮಾಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಪಿತೂರಿಯನ್ನು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ನಡೆಸುತ್ತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ವಾಸ್ತವ ಅಂಕಿ ಅಂಶಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಹಾಗೂ ನಮ್ಮ ರೈತರ ಹಿತಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಂದು ಕಡೆ ನೀರು ಬಿಟ್ಟು ನಂತರ ಸರ್ವ ಪಕ್ಷದ ಸಭೆ ಕರೆಯುವುದು, ಇನ್ನೊಂದೆಡೆ ತ.ನಾಡಿಗೆ ನಿರಂತರವಾಗಿ ನೀರು ಹರಿಸಿ ಕೇಂದ್ರಕ್ಕೆ ಪತ್ರ ಬರೆಯುವುದು, ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡುವುದು ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಷ್ಟೇ ಎಂದು ಟೀಕಿಸಿದ್ದಾರೆ.
    ತ.ನಾಡಿನಲ್ಲಿ ಹೊಸ ನೀರಾವರಿ ಯೀಜನೆಗಳು, ಹೊಸ ನಾಲೆಗಳ ಕಾಮಗಾರಿ, ವ್ಯವಸಾಯ ಭೂಮಿ ವಿಸ್ತರಣೆ ಹೆಚ್ಚಾಗಿದೆ. ಇದನ್ನು ಖಂಡಿಸಿ ರಾಜ್ಯ ಸರ್ಕಾರ ಪ್ರಾಧಿಕಾರಕ್ಕೆ ಪತ್ರ ಬರೆಯಬೇಕು. ಇಸ್ರೋ ಉಪಗ್ರಹ ಸರ್ವೇ ಮೂಲಕ ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ಅಣೆಕಟ್ಟೆಗಳಲ್ಲಿರುವ ನೀರಿನ ಶೇಖರಣೆ, ಹಾಲಿ ಇರುವ ನೀರಾವರಿ ಭೂಮಿಯ ವರದಿಯನ್ನು ತರಿಸಿಕೊಂಡು ಸುಪ್ರೀಂ ಕೋರ್ಟ್ ಅಥವಾ ಪ್ರಾಧಿಕಾರದ ಮುಂದಿಡಲಿ ಆಗ ರಾಜ್ಯಕ್ಕೆ ಖಂಡಿತ ನ್ಯಾಯ ಸಿಗುತ್ತದೆ. ಅದನ್ನು ಬಿಟ್ಟು ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗುತ್ತೇವೆ ಎನ್ನುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.
    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಇಂಡಿಯಾ ಕೂಟದ ಸದಸ್ಯರಾಗಿರುವ ತ.ನಾಡಿನ ಸಿಎಂ ಸ್ಟಾಲಿನ್ ಮನವೊಲಿಸುವ ಉದ್ದೇಶದಿಂದ ರಾಜ್ಯದ ಕಾವೇರಿ ನೀರನ್ನು ಬಸಿದು ತಮಿಳುನಾಡಿಗೆ ಬಿಡುತ್ತಿರುವುದು ರಾಜ್ಯದ ಜನತೆಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ ಅವರು, ಒಟ್ಟಾರೆ ರಾಜ್ಯದ ರೈತರನ್ನು ಬಲಿಕೊಟ್ಟು ತಮಿಳುನಾಡು ರೈತರನ್ನು ಉದ್ದಾರ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾತ್ರೋರಾತ್ರಿ ನೀರು ಹರಿಸಿ ತ.ನಾಡು ಸರ್ಕಾರದಿಂದ ಶಹಬ್ಬಾಷ್‌ಗಿರಿ ಪಡೆಯಲು ಮುಂದಾಗಿದೆ ಎಂದು ಟೀಕಿಸಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts