ಮೂರು ಪ್ರಶ್ನೆಗಳ ಮೂಲಕ ರಾಹುಲ್​ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಡಿವಿಎಸ್​

ಬೆಂಗಳೂರು: ಕೇಂದ್ರದ ಗದ್ದುಗೆ ಏರಲು ನಾನಾ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ರಾಜಧಾನಿಯಲ್ಲಿ ನಡೆಯುವ ದೋಸ್ತಿ ಪಕ್ಷಗಳ ಸಮಾವೇಶಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಲಿ ಸಂಸದ ಡಿ.ವಿ.ಸದಾನಂದಗೌಡರು ರಾಹುಲ್​ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಟ್ವೀಟ್​ ಮೂಲಕ ಸದಾನಂದಗೌಡರು ರಾಹುಲ್​ ಗಾಂಧಿ ಅವರ ನಡೆಯನ್ನು ಪ್ರಶ್ನಿಸಿದ್ದಾರೆ. ಬೆಂಗಳೂರಿಗೆ ಬರುತ್ತಿರುವ ಮಾನ್ಯ ರಾಹುಲ್​ರವರೇ ತಾವು ಯಾವ ಸ್ಥಾನ ಅಲಂಕೃತರಾಗಿ ಇಂದು ಬರುತ್ತಿದೀರೆಂದು ತಿಳಿಸಿಬಿಡಿ. ಜನ ಗಲಿಬಿಲಿಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪಕ್ಷದ ಅಧ್ಯಕ್ಷರಾಗಿಯೇ ಬೆಂಗಳೂರಿಗೆ ಬರ್ತಿದ್ದಿರಾ?, ಮಹಾ ಘಟಬಂಧನದ ಮುಖ್ಯ ಪಾತ್ರಧಾರಿಯಾಗಿಯೇ? ಅಥವಾ ಸಾಂಧರ್ಬಿಕ ಮೈತ್ರಿ ಮಾಡಿಕೊಂಡು ಈಗ ಪರಿವರ್ತನೆ ಮಾಡಲು ಹೊರಟಿರುವ ಜನರ ನಾಯಕರಾಗಿಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆ ಹುಟ್ಟಿದ್ದು ಹೇಗೆಂದು ತಿಳಿಸಿದ ಡಿವಿಎಸ್
ನಿಮ್ಮ ಪಕ್ಷದ ಅಧ್ಯಕ್ಷರಾಗಿಯೇ? ಎಂಬ ಪ್ರಶ್ನೆ ಹುಟ್ಟಿದ್ದೇಗೆ ಎಂಬುದಕ್ಕೆ ಅದು ಅಧ್ಯಕ್ಷರು ನೀವೆಂದು ಎನಿಸಲೇ ಇಲ್ಲ. ನೀವು ಸಂಸತ್​ನಲ್ಲಿ ಪ್ರತಿನಿಧಿಸಿದ ಉತ್ತರ ಪ್ರದೇಶದಲ್ಲಿ ನಿಮ್ಮನ್ನು ನಿಮ್ಮ ಮಿತ್ರರು ಗಣನೆಗೆ ತೆಗೆದುಕ್ಕೊಳ್ಳಲಿಲ್ಲ ನಿಮ್ಮೊಂದಿಗೆ ಮೈತ್ರಿಗೆ ಒಪ್ಪಲಿಲ್ಲ ಎಂದು ಕಾಲೆಳೆದಿದ್ದಾರೆ.

ನೀವೇ ಹೇಳುವ ಮಹಾಘಟಬಂಧನದ ಮುಖ್ಯ ಪಾತ್ರಧಾರಿಯಾಗಿಯೇ ಎಂಬ ಪ್ರಶ್ನೆ ಹುಟ್ಟಿದ್ದು, ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲಿ ಆರಂಭ ಆಗಿದ್ದು ನೆನಪಿದೆ. ಬಳಿಕ ದೇಶಾದ್ಯಂತ ನಿಮ್ಮ ಘಟಬಂಧ ಹಳ್ಳ ಹಿಡಿದದ್ದೂ ತಿಳಿದುಕ್ಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸಾಂಧರ್ಭಿಕ ಮೈತ್ರಿ ಮಾಡಿಕೊಂಡು ಈಗ ಪರಿವರ್ತನೆ ಮಾಡಲು ಹೊರಟಿರುವ ಜನರ ನಾಯಕರಾಗಿಯೇ? ದಿನಕ್ಕೊಂದು ವೇಷ, ಜನ ನಂಬುತ್ತಾರಾ? ಎಂದು ಟ್ವೀಟ್​ ಮೂಲಕ ರಾಹುಲ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)