ಎಲ್.ಕೆ.ಆಡ್ವಾಣಿ @ 91

| ವೈಆರ್​ಎನ್

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣದ ಚರ್ಚಾವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ‘ಯಾವುದೇ ಸುಗ್ರೀವಾಜ್ಞೆಗಳಿಲ್ಲದೆ ಇದೇ ಡಿಸೆಂಬರ್​ನಿಂದಲೇ ನಿರ್ಮಾಣ ಕಾಮಗಾರಿ ಶುರುವಾಗುವುದು ಶತಃಸಿದ್ಧ, ಇದಕ್ಕೆ ರಾಮಜನ್ಮಭೂಮಿ ವಿವಾದ ಪ್ರಕರಣದಲ್ಲಿ ವಾದಿಸುತ್ತಿರುವ ಎರಡೂ ಗುಂಪುಗಳ ಸಹಮತವಿದೆ’ ಎಂದು ಬಿಜೆಪಿ ಮಾಜಿ ಸಂಸದ ಹಾಗೂ ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷರೂ ಆದ ರಾಮ್ ವಿಲಾಸ್ ವೇದಾಂತಿ ಹೇಳಿದ್ದರೆ, ‘ಮಂದಿರ ನಿರ್ಮಾಣ ಸಂಬಂಧ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ; ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದ್ದರೂ ಸಂಸತ್ ಈ ನಿಟ್ಟಿನಲ್ಲಿ ಕಾಯ್ದೆ ರೂಪಿಸಲು ಅಡ್ಡಿಯಿಲ್ಲ’ ಎಂದಿದ್ದಾರೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಲಮೇಶ್ವರ್.

ಒಟ್ಟಿನಲ್ಲಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣವಾಗಬೇಕು ಎಂಬ ಕೂಗಿಗೆ ದೇಶಾದ್ಯಂತ ತೀವ್ರತೆ ಒದಗಿದ್ದು, ನವದೆಹಲಿಯಲ್ಲಿ ಸಭೆ ಸೇರಿದ್ದ ದೇಶದ ವಿವಿಧೆಡೆಯ ಸಾಧು-ಸಂತರಿಂದ ಏಕಭಿಪ್ರಾಯ ಹೊಮ್ಮಿದೆ.

ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದಾಗ ಅಪ್ರಯತ್ನವಾಗಿ ನೆನಪಾಗುವ ಹೆಸರು ಎಲ್.ಕೆ. ಆಡ್ವಾಣಿ ಅವರದ್ದು. ಕಾರಣ, ರಾಮ ಜನ್ಮಭೂಮಿ ಹೋರಾಟದಲ್ಲಿ ಗಮನಾರ್ಹ ಪಾತ್ರ ವಹಿಸಿದವರು, ದೇಶದ ಉದ್ದಗಲಕ್ಕೂ ಹಮ್ಮಿಕೊಳ್ಳಲಾದ ಸಂಚಲನಾತ್ಮಕ ರಥಯಾತ್ರೆಗಳ ಕೇಂದ್ರಬಿಂದುವೇ ಆಗಿದ್ದವರು ಆಡ್ವಾಣಿ. ಇಂದು 91ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಈ ಮುತ್ಸದ್ದಿಯ ಬದುಕಿನ ಆಯ್ದ ಘಟ್ಟಗಳೆಡೆಗಿನ ಕಿರುನೋಟ ಇಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮೂಲಕ ಸಂಘಟನೆ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ರಾಜಕೀಯವನ್ನೂ ಪ್ರವೇಶಿಸಿ, ಕಚೇರಿ ಕಾರ್ಯದರ್ಶಿಯಿಂದ ದೇಶದ ಉಪಪ್ರಧಾನಿ ಹುದ್ದೆವರೆಗಿನ ವಿವಿಧ ಹೊಣೆಗಾರಿಕೆಗಳಿಗೆ ಹೆಗಲುಕೊಟ್ಟ ಆಡ್ವಾಣಿಯವರು ಹುಟ್ಟಿದ್ದು, ಬೆಳೆದಿದ್ದು ಪಾಕಿಸ್ತಾನದ ಕರಾಚಿಯಲ್ಲಿ. 1947ರಲ್ಲಿ ದೇಶವಿಭಜನೆಯಾದಾಗ ಕರಾಚಿಯಿಂದ ದೆಹಲಿಗೆ ಸ್ಥಾನಾಂತರಗೊಳ್ಳಬೇಕಾಯಿತು.

ಅದು 1957ರ ಕಾಲಘಟ್ಟ. ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ಅತಿರಥ- ಮಹಾರಥರು ಸಂಸದರಾಗಿದ್ದ ಕಾಲವದು. ಪಕ್ಷದ ಕಾರ್ಯಚಟುವಟಿಕೆ ಮತ್ತು ಸಂಸದೀಯ ವ್ಯವಹಾರಗಳನ್ನು ನೋಡಿಕೊಳ್ಳುವ ದಕ್ಷ ಕಾರ್ಯಕರ್ತನ ಅಗತ್ಯ ಎದುರಾದಾಗ, ಜನಸಂಘದ ಅಧ್ಯಕ್ಷ ಪಂಡಿತ ದೀನದಯಾಳ ಉಪಾಧ್ಯಾಯರಿಗೆ ಹೊಳೆದ ಹೆಸರೇ ಆಡ್ವಾಣಿಯವರದ್ದಾಗಿ, ರಂಗಪ್ರವೇಶ ಆಗಿಯೇಬಿಟ್ಟಿತು. 1970ರಲ್ಲಿ ರಾಜ್ಯಸಭಾ ಸದಸ್ಯತ್ವ, 1972ರಲ್ಲಿ ಜನಸಂಘದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಆಡ್ವಾಣಿ ಮಡಿಲು ಸೇರಿದವು. ತರುವಾಯ, 1975ರಲ್ಲಿ ದೇಶದಲ್ಲಿ ತುರ್ತಪರಿಸ್ಥಿತಿ ಘೋಷಣೆಯಾದಾಗ ಬಂಧಿತರಾದವರಲ್ಲಿ ವಾಜಪೇಯಿ ಮತ್ತು ಆಡ್ವಾಣಿ ಕೂಡ ಸೇರಿದ್ದರು, ಸೆರೆವಾಸದಲ್ಲೂ ಸಹವರ್ತಿಗಳಾಗಿದ್ದರು. 1977ರ ಜ. 18ರಂದು ಸೆರೆವಾಸದಿಂದ ಮುಕ್ತರಾದ ಆಡ್ವಾಣಿ, ಬದಲಾದ ರಾಜಕೀಯ ಲೆಕ್ಕಾಚಾರಗಳಿಗೆ ತಕ್ಕಂತೆ ರೂಪುಗೊಂಡ ಭಾರತೀಯ ಜನತಾಪಕ್ಷದ ಮಹತ್ವದ ಶಕ್ತಿಯೇ ಆಗಿ ಬೆಳೆದರು.

ಬಿಜೆಪಿಯ ಒಡನಾಡಿಗಳಲ್ಲಿ ಕೆನೆಗಟ್ಟಿದ್ದ ರಾಷ್ಟ್ರಭಕ್ತಿಯನ್ನು ಜನಮಾನಸಕ್ಕೆ ಮನವರಿಕೆ ಮಾಡಿಕೊಟ್ಟು ಪಕ್ಷವನ್ನು ಅಧಿಕಾರದ ಗದ್ದುಗೆಯ ಸನಿಹ ಒಯ್ಯಲು ಅವರು ರೂಪಿಸಿದ ಪರಿಣಾಮಕಾರಿ ತಂತ್ರಗಳಲ್ಲಿ ಮಹತ್ವದ್ದು ‘ರಥಯಾತ್ರೆ’. ಪ್ರತಿಸಲವೂ ಒಂದೊಂದು ವಿಷಯ ಮುಂದಿಟ್ಟುಕೊಂಡು ದೇಶದ ಉದ್ದಗಲಕ್ಕೂ ದಣಿವರಿಯದೆ ಸಂಚರಿಸಿ, ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿ, ಕೆಲವೇ ರಾಜ್ಯಗಳಿಗೆ ಸೀಮಿತವಾಗಿದ್ದ ಬಿಜೆಪಿ-ಬೇರನ್ನು ರಾಷ್ಟ್ರವ್ಯಾಪಿ ಹಬ್ಬಿಸುವಲ್ಲಿ ಮತ್ತು ಕೈಬೆರಳೆಣಿಕೆಯಷ್ಟಿದ್ದ ಸಂಸದರ ಸಂಖ್ಯೆ ನಿರ್ಣಾಯಕ ಮಟ್ಟ ಮುಟ್ಟುವಂತಾಗುವಲ್ಲಿ ಆಡ್ವಾಣಿಯವರ ಪ್ರಧಾನ ಯೋಗದಾನವಿದೆ. ‘ರಾಮರಥ ಯಾತ್ರೆ’, ‘ಜನಾದೇಶ ಯಾತ್ರೆ’, ‘ಸ್ವರ್ಣಜಯಂತಿ ರಥಯಾತ್ರೆ’, ‘ಜನಚೇತನಾ ಯಾತ್ರೆ’ ಈ ಪಥದ ಮೈಲಿಗಲ್ಲುಗಳು.

ಅಧಿಕಾರ ದಕ್ಕುತ್ತದೆ ಎಂದಾಕ್ಷಣ ಸ್ನೇಹಕ್ಕೆ ತಿಲಾಂಜಲಿ ನೀಡುವುದು ರಾಜಕೀಯದಲ್ಲಿ ಸರ್ವೆಸಾಮಾನ್ಯ; ಆದರೆ ಆಡ್ವಾಣಿ ಈ ವರ್ತನೆಗೆ ಹೊರತಾದವರು. ವಾಜಪೇಯಿ ಬದುಕಿರುವವರೆಗೂ ಅವರೊಂದಿಗಿನ ಸ್ನೇಹಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡರು. ವಾಜಪೇಯಿಯವರು 3 ಬಾರಿ ಪ್ರಧಾನಿಯಾದಾಗಲೂ ಆಡ್ವಾಣಿ ಮನಸಾರೆ ಹರಸಿದರೇ ಹೊರತು ಬಂಡಾಯದ ಬಾವುಟ ಹಾರಿಸಲಿಲ್ಲ. 2004ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋತಾಗಲೂ ಮತ್ತೊಬ್ಬರ ಮೇಲೆ ಅದರ ಹೊಣೆ ಹೊರಿಸದೆ ಪ್ರಬುದ್ಧತೆ ಮೆರೆದವರು ಆಡ್ವಾಣಿ. ‘ಮೈ ಕಂಟ್ರಿ ಮೈ ಲೈಫ್’ ಹೆಸರಿನ ಆಡ್ವಾಣಿ ಆತ್ಮಕಥನದಲ್ಲಿ ಅವರ ಬಾಲ್ಯದಿಂದ ಮೊದಲ್ಗೊಂಡು ರಾಜಕೀಯ ಬದುಕಿನ ಏಳು-ಬೀಳುಗಳವರೆಗಿನ ಪ್ರತಿಬಿಂಬವಿದೆ.

ಆಡ್ವಾಣಿ ಜೀವನಪಥ

# 1927: ಕರಾಚಿಯಲ್ಲಿ ಜನನ
#1936-42: ಕರಾಚಿಯ ಸೇಂಟ್ ಪ್ಯಾಟ್ರಿಕ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ
#1942: ಆರೆಸ್ಸೆಸ್ ಸಂಪರ್ಕಕ್ಕೆ
#1944: ಕರಾಚಿಯ ಮಾಡೆಲ್ ಹೈಸ್ಕೂಲ್​ನಲ್ಲಿ ಶಿಕ್ಷಕರಾಗಿ ಸೇರ್ಪಡೆ
#1947: ಸಿಂಧ್​ನಿಂದ ದೆಹಲಿಗೆ ವಲಸೆ
#1957: ವಾಜಪೇಯಿ ಸಹಾಯಕರಾಗಿ ದೆಹಲಿಗೆ
#1965: ಕಮಲಾರೊಂದಿಗೆ ವಿವಾಹ
#1970: ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶ
#1972: ಜನಸಂಘದ ಅಧ್ಯಕ್ಷರಾಗಿ ಆಯ್ಕೆ
#1975: ತುರ್ತಪರಿಸ್ಥಿತಿಯಲ್ಲಿ ಬಂಧನ; ಬೆಂಗಳೂರಿನಲ್ಲಿ ಜೈಲುವಾಸ
#1977-79: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ
#1980-86: ಬಿಜೆಪಿ ಪ್ರಧಾನ ಕಾರ್ಯದರ್ಶಿ
#1986: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
#1988: ಎರಡನೇ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
#1990: ರಾಮ ರಥಯಾತ್ರೆ (ಸೋಮನಾಥದಿಂದ ಅಯೋಧ್ಯೆವರೆಗೆ)
#1997: ಸ್ವರ್ಣಜಯಂತಿ ರಥಯಾತ್ರೆ
#1999-2004: ಉಪಪ್ರಧಾನಿ
#2004-2009: ಲೋಕಸಭೆಯ ಪ್ರತಿಪಕ್ಷ ನಾಯಕ