ಪ. ಬಂಗಾಳ ಪೊಲೀಸರ ಮೇಲೆ ನಂಬಿಕೆಯಿಲ್ಲ: ಕೇಂದ್ರ ಪಡೆಗಳ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಸಲು ಬಿಜೆಪಿ ಆಗ್ರಹ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಪೊಲೀಸರು ಸಹಕರಿಸುತ್ತಾರೆ ಎಂಬ ನಂಬಿಕೆಯಿಲ್ಲ. ಆದ್ದರಿಂದ, ಲೋಕಸಭೆ ಚುನಾವಣೆಯನ್ನು ಕೇಂದ್ರ ಭದ್ರತಾಪಡೆಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗ ಚುನಾವಣೆ ಆಯೋಗದ ಅಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಲಿದೆ. ಸಂಜೆ 5 ಗಂಟೆಗೆ ಈ ಭೇಟಿ ನಡೆಯಲಿದೆ.

ಚುನಾವಣಾ ಆಯೋಗಕ್ಕೆ ಸೋಮವಾರವಷ್ಟೇ ಬಿಜೆಪಿ ದೂರು ನೀಡಿದೆ. ತೃಣಮೂಲ ಕಾಂಗ್ರೆಸ್​ ನಾಯಕರು ಮತದಾರರಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಉಳಿದಿಲ್ಲ ಎಂದು ದೂರಿನಲ್ಲಿ ತಿಳಿಸಿದೆ.

ಭಾನುವಾರ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕೋಲ್ಕತದ ಮೇಯರ್​ ಆಗಿರುವ ಟಿಎಂಸಿ ಸಚಿವರೊಬ್ಬರು ಮಾತನಾಡಿ ಕೇಂದ್ರ ಸಶಸ್ತ್ರ ಪೊಲೀಸ್​ ಪಡೆ ಚುನಾವಣೆ ವೇಳೆ ಎರಡು ದಿನಗಳು ಮಾತ್ರ ಇರುತ್ತದೆ. ಉಳಿದ ದಿನಗಳಲ್ಲಿ ಜನರು ಪೊಲೀಸರನ್ನೇ ಅವಲಂಬಿಸಬೇಕಾಗಿದೆ ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿ ಮುಖ್ಯ ಚುನಾವಣಾ ಅಧಿಕಾರಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಜಯಪ್ರಕಾಶ್ ಮಜುಂದಾರ್​, ಟಿಎಂಸಿ ಅವರು ಜನರನ್ನು ಬೆದರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಈಗಾಗಲೇ ಚುನಾವಣಾ ಆಯೋಗವನ್ನು ಒಮ್ಮೆ ಭೇಟಿ ಮಾಡಿರುವ ಬಿಜೆಪಿ ನಿಯೋಗ ಚುನಾವಣೆಗೆ ಸಂಬಂಧಿಸಿದ ಪಕ್ಷದ ಚಟುವಟಿಕೆಗಳನ್ನು ನಡೆಸಲು ಟಿಎಂಸಿ ಪಕ್ಷ ಬಿಡುತ್ತಿಲ್ಲ ಎಂದು ದೂರು ನೀಡಿದೆ. ಟಿಎಂಸಿ ಪಕ್ಷದ ಏಜೆಂಟ್​ಗಳ ರೀತಿ ವರ್ತಿಸುವ ಸರ್ಕಾರಿ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿ ಎಂದು ಮನವಿ ಮಾಡಿರುವ ಬಿಜೆಪಿ, ಚುನಾವಣೆ ಉತ್ತಮವಾಗಿ ನಡೆಯಲು ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಕೋರಿಕೊಂಡಿದೆ. ಅಲ್ಲದೆ, ಕೇಂದ್ರದ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯದಲ್ಲಿ ಬೆದರಿಕೆಯಿದೆ ಎಂದೂ ಆರೋಪಿಸಿದೆ.

ಪಶ್ಚಿಮ ಬಂಗಾಳದಲ್ಲಿ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಏಪ್ರಿಲ್​ 11 ರಿಂದ ಆರಂಭವಾಗುವ ಚುನಾವಣೆ ಮೇ 19ಕ್ಕೆ ಮುಗಿಯಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)