ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಬಿಜೆಪಿ: ಸ್ವತಃ ತ್ರಿಶತಕ ಸಾಧನೆ ಮಾಡಿದ ಕೇಸರಿ ಪಕ್ಷ

ನವದೆಹಲಿ: ನರೇಂದ್ರ ಮೋದಿ ಎಂಬ ಸುನಾಮಿಯ ಬೆನ್ನೇರಿದ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಅಧಿಕಾರವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಮುಕ್ತಾಯವಾಗಿದ್ದ 7 ಹಂತಗಳ ಲೋಕಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಸ್ವತಃ ತ್ರಿಶತಕ ಸಾಧನೆ ಮಾಡಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವಲ್ಲಿ ಯಶಸ್ವಿಯಾಯಿತು.

2014ರ ಲೋಕಸಭೆ ಚುನಾವಣೆಯಲ್ಲಿನ 350 ಸೀಟುಗಳ ಸಾಧನೆಯನ್ನು ಪುನರಾವರ್ತಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ದಾಪಲುಗಾಲನ್ನಿಟ್ಟಿದ್ದು, ಈಗಾಗಲೆ 340ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾ ಸೇರಿ ಪೂರ್ವ ರಾಜ್ಯಗಳಲ್ಲಿನ ತನ್ನ ಪ್ರದರ್ಶನವನ್ನು ಉತ್ತಮ ಪಡಿಸಿಕೊಂಡಿರುವ ಬಿಜೆಪಿ 42 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನು ಹೊರತುಪಡಿಸಿ, ದೇಶದ ಇತರೆಡೆಳಲ್ಲಿ 260ಕ್ಕೂ ಹೆಚ್ಚು ಸೀಟುಗಳನ್ನು ತನ್ನದಾಗಿಸಿಕೊಂಡಿದೆ. ಇದೇ ವೇಳೆ ಕಾಂಗ್ರೆಸ್​ 50 ಸೀಟುಗಳನ್ನು ಗೆಲ್ಲಲಷ್ಟೇ ಶಕ್ತವಾಗಿದ್ದು, 2014ಕ್ಕೆ ಹೋಲಿಸಿದರೆ ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿದೆ ಎಂದು ಹೇಳಬಹುದಾಗಿದೆ.

2014ರಲ್ಲಿ ಸ್ವತಃ 282 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ 343 ಸೀಟುಗಳನ್ನು ಗೆಲ್ಲಲು ಎನ್​ಡಿಎ ಮೈತ್ರಿಕೂಟಕ್ಕೆ ಸಹಕರಿಸಿತ್ತು. ಪೂರ್ಣ ಬಹುಮತದೊಂದಿಗೆ ಕಾಂಗ್ರೇಸ್ಸೇತರ ಸರ್ಕಾರವೊಂದು ಅಧಿಕಾರ ಉಳಿಸಿಕೊಂಡಿದ್ದು ಇದೇ ಮೊದಲು. ಇದಕ್ಕೂ ಮುನ್ನ ಕಾಂಗ್ರೆಸ್​ನ ಜವಾಹರಲಾಲ್​ ನೆಹರು ಮತ್ತು ಇಂದಿರಾ ಗಾಂಧಿ ಇಂಥ ಸಾಧನೆ ಮಾಡಿದ್ದರು.

ಹಿಂದಿ ಹೃದಯಭೂಮಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಬಿಜೆಪಿ ಪೂರ್ವ ಭಾರತ ಅಲ್ಲದೆ, ಪಶ್ಚಿಮದಲ್ಲಿ ಮಹಾರಾಷ್ಟ್ರ ಹಾಗೂ ದಕ್ಷಿಣದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತು. ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಮಾತ್ರ ಮೋದಿ ಸುನಾಮಿಯಿಂದ ಬಚಾವಾಗಿವೆ.

ಗೆಲುವಿಗೆ ಕಾರಣಗಳು ಇವು…
ಪಾಕಿಸ್ತಾನದ ಬಾಲಾಕೋಟ್​ನಲ್ಲಿನ ಉಗ್ರರರ ನೆಲೆಗಳ ಮೇಲಿನ ವೈಮಾನಿಕ ದಾಳಿಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಮಾಡಿದ್ದು, ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣವಾಯಿತು ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ಭರಾಟೆಯಿಂದಾಗಿ ಆರ್ಥಿಕ ಹಿಂಜರಿತ ಮತ್ತು ರೈತರ ಅಸಹನೆಯಂಥ ಆಡಳಿತ ವಿರೋಧ ಅಲೆಯ ಪ್ರಭಾವವೇ ಕ್ಷೀಣಿಸುವಂತೆ ಮಾಡಿತು ಎಂದು ಹೇಳಿದ್ದಾರೆ.

ಅಮೇಠಿಯಲ್ಲಿ ರಾಹುಲ್​ ಸೋಲು
ಗಾಂಧಿ ಕುಟುಂಬ ಪಟ್ಟುಪಾಳೆಯವಾಗಿದ್ದ ಅಮೇಠಿಯಲ್ಲಿ ಎಐಸಿಸಿ ರಾಹುಲ್​ ಗಾಂಧಿ ಸೋಲುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್​ನ ಕಳಪೆ ಸಾಧನೆ ಮುಂದುವರಿದಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ 38 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಆದರೆ, ಇದೇ ರಾಹುಲ್​ ಗಾಂಧಿ ಕೇರಳದ ವಯನಾಡಿನಲ್ಲಿ ದಾಖಲೆಯ 4.2 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್​ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದಾರೆ.

ಈ ಬಾರಿಯೂ ಪ್ರತಿಪಕ್ಷ ನಾಯಕನಿಲ್ಲ
ಕಾಂಗ್ರೆಸ್​ ಸೇರಿ ಯಾವುದೇ ಪಕ್ಷವೂ 50ಕ್ಕಿಂತ ಹೆಚ್ಚಿನ ಸೀಟು ಗೆಲ್ಲದಿರುವ ಕಾರಣ ಸಂಸತ್​ನಲ್ಲಿ ಈ ಬಾರಿ ಕೂಡ ಪ್ರತಿಪಕ್ಷ ನಾಯಕನಿರುವುದಿಲ್ಲ. 2014ರಲ್ಲಿ ಕೂಡ ಕಾಂಗ್ರೆಸ್​ ಸೇರಿ ಯಾವುದೇ ಪಕ್ಷ 50 ಸೀಟುಗಳನ್ನು ಗೆಲ್ಲದ ಕಾರಣ ಪ್ರತಿಪಕ್ಷಗಳ ನಾಯಕನಿಲ್ಲದೆ ಲೋಕಸಭೆ ಕಾರ್ಯನಿರ್ವಹಿಸಿತ್ತು.

Leave a Reply

Your email address will not be published. Required fields are marked *