ರಾಮ ಮಂದಿರಕ್ಕೆ ಸುಗ್ರೀವಾಜ್ಞೆ?

ನವದೆಹಲಿ: ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸುವ ಅವಕಾಶ ಕೇಂದ್ರ ಸರ್ಕಾರದ ಮುಂದೆ ಯಾವಾಗಲೂ ಇದೆ. ಆದರೆ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾಗಲಿ ಎಂದು ಬಿಜೆಪಿ ಬಯಸುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್​ನಲ್ಲಿ ತ್ವರಿತ ವಿಚಾರಣೆ ಆಗಬೇಕು ಎನ್ನುವುದು ಬಿಜೆಪಿಯ ಇರಾದೆ. ಆದರೆ ತ್ವರಿತ ವಿಚಾರಣೆಗೆ ಕೋರ್ಟ್ ಒಪ್ಪದಿದ್ದರೆ ಕೇಂದ್ರ ಸರ್ಕಾರ ಮುಂದಿನ ಆಯ್ಕೆಗಳ ಬಗ್ಗೆ ಚಿಂತನೆ ನಡೆಸುವುದು ಅನಿವಾರ್ಯ ಎಂದು ರಾಮ್ ಮಾಧವ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತ್ವರಿತ ವಿಚಾರಣೆ ನಡೆಸದಿದ್ದರೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ ಎಂಬ ಮುನ್ಸೂಚನೆಯನ್ನು ರಾಮ್ ಮಾಧವ್ ನೀಡಿದ್ದಾರೆ. ಕಳೆದೊಂದು ವಾರದಿಂದ ಕೇಂದ್ರ ಸರ್ಕಾರದ ಹಿರಿಯ ಸಚಿವರು ಹಾಗೂ ಬಿಜೆಪಿ ಮುಖಂಡರು ಇದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ಶಬರಿಮಲೆ ಪ್ರಕರಣದ ರೀತಿಯಲ್ಲಿ ತ್ವರಿತ ವಿಚಾರಣೆ ನಡೆಸಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ಹೇಳಿಕೆ ನೀಡಿದ್ದರು.