ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹವಿಜಯವಾಣಿ ಸುದ್ದಿಜಾಲ ಕುಶಾಲನಗರ
ಶಾಸಕರ ವಿಶ್ವಾಸ ಕಳೆದುಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು ನೇತೃತ್ವದಲ್ಲಿ ಶುಕ್ರವಾರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಕೆ.ಜಿ. ಮನು ಮಾತನಾಡಿ, ಸ್ವಪಕ್ಷದ ಶಾಸಕರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಮೈತ್ರಿ ಸರ್ಕಾರ ಅಧಿಕಾರದಿಂದ ತಕ್ಷಣ ನಿರ್ಗಮಿಸಬೇಕು. ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯ ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದರು.
ಸ್ವಪಕ್ಷ ಹಾಗೂ ಮಿತ್ರ ಪಕ್ಷ ಕಾಂಗ್ರೆಸ್ಸಿನ ಶಾಸಕರ ಬೇಡಿಕೆ ಈಡೇರಿಸಲು ಆಗದ ಕುಮಾರಸ್ವಾಮಿಗೆ ರಾಜ್ಯದ ಸಾಮಾನ್ಯ ಜನರ ಆಶೋತ್ತರ ಈಡೇರಿಸಲು ಸಾಧ್ಯವಿಲ್ಲ. ಕಾನೂನು ಹೋರಾಟಕ್ಕೆ ಮುಂದಾಗದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಅತೃಪ್ತ 13 ಶಾಸಕರ ರಾಜೀನಾಮೆ ಅಂಗೀಕರಿಸದೆ ಸ್ಪೀಕರ್ ಕಾಲಹರಣ ಮಾಡುತ್ತಿದ್ದಾರೆ. ಸ್ಪೀಕರ್ ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ದೋಸ್ತಿ ಸರ್ಕಾರದ ಸದಸ್ಯರಲ್ಲಿ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವ ಸಿಎಂ ಹಾಗೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಯಾವ ನೈತಿಕತೆಯೊಂದಿಗೆ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಬಿಜೆಪಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಸೋಮವಾರಪೇಟೆ ತಾಲೂಕು ಯುವ ಘಟಕ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಪ.ಪಂ. ಸದಸ್ಯರಾದ ಅಮೃತ್‌ರಾಜ್, ರೂಪಾ ಉಮಾಶಂಕರ್, ಬಿಜೆಪಿ ಮುಖಂಡರಾದ ಎಂ.ವಿ.ನಾರಾಯಣ, ವರದ, ಬೋಸ್ ಮೊಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *