ಎಚ್‌ ಡಿ ಕುಮಾರಸ್ವಾಮಿ, ಕಾಂಗ್ರೆಸ್‌ ಮುಖಂಡರ ವಿರುದ್ಧ ಬಿಜೆಪಿ ಪ್ರತಿಭಟನೆ

ಚಿತ್ರದುರ್ಗ: ಬಿಜೆಪಿ ಕಾರ‌್ಯಕರ್ತರು, ಮುಖಂಡರ ವಿರುದ್ಧ ರಾಜ್ಯದ ಸಮ್ಮಿಶ್ರ ಸರ್ಕಾರ ವಿನಾ ಕಾರಣ ಸುಳ್ಳು ಮೊಕದ್ದಮೆ ಹೂಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಾರ‌್ಯಕರ್ತರು ನಗರದ ಡಿಸಿ ಸರ್ಕಲ್ ಬಳಿ ಸೋಮವಾರ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ, ಬಿಜೆಪಿ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರ ವಿರುದ್ಧ ಕಾರಣಗಳೇ ಇಲ್ಲದೇ ಸುಳ್ಳು ಮೊಕದ್ದಮೆಗಳನ್ನು ಹೂಡುವ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ದೂರಿದರು.

ರಾಜ್ಯ ಸರ್ಕಾರ ಈವರೆಗೆ ಹೂಡಿರುವ ಪಕ್ಷದ ಹಲವು ಪ್ರಮುಖರ ಹೆಸರು ಪ್ರಸ್ತಾಪಿಸಿದ ಅವರು, ಕೂಡಲೇ ಪ್ರಕರಣಗಳನ್ನು ಹಿಂಪಡೆಯದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.

ಮುಖಂಡ ನರೇಂದ್ರನಾಥ್, ತಿಪ್ಪೇಸ್ವಾಮಿ, ನಾನಾ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಇದ್ದರು.