ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮೀಸಲಾತಿ ರದ್ದು ಹೇಳಿಕೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ರಾಹುಲ್ ಗಾಂಧಿ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದು ವಿಫಲಗೊಳಿಸಿದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ರಾಹುಲ್ ಗಾಂಧಿಯವರು ನಾಯಕರಲ್ಲ. ಒಬ್ಬ ಅಪ್ರಬುದ್ಧ ವ್ಯಕ್ತಿ ಎಂದು ಹರಿಹಾಯ್ದರು.
ಅಲ್ಲದೆ, ನಾಗಮಂಗಲದಲ್ಲಿ ಗಲಭೆ, ಹಿಂದು ಕಾರ್ಯಕರ್ತರ ಬಂಧನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತ ಧಿಕ್ಕಾರ ಮೊಳಗಿಸಿದರು.
- ನಂತರ ಛಲವಾದಿ ನಾರಾಯಣಸ್ವಾಮಿ ಸುದ್ದಿಗಾರರ ಜತೆ ಮಾತನಾಡಿ ನೆಹರೂ ಅವರು ತಾವು ಮೀಸಲಾತಿ ವಿರೋಧಿ ಎಂದಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿಯವರೂ ಅದನ್ನೇ ಮುಂದುವರೆಸಿದ್ದರು. ಈಗ ರಾಹುಲ್ ಗಾಂಧಿಯವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿಯವರು ಲೋಕಸಭೆಯ ವಿಪಕ್ಷ ನಾಯಕರಾಗಿದ್ದು, ಅವರನ್ನು ನಾನು ಗೌರವಿಸಲೇಬೇಕು. ಈ ಗೌರವ ಬೇರೆ; ಭಾರತ ದೇಶದಲ್ಲಿ ತಾವು ಅಧಿಕಾರಕ್ಕೆ ಬಂದಾಗ ಮೀಸಲಾತಿಯನ್ನು ರದ್ದು ಮಾಡುವ ಪ್ರಯತ್ನ ಮಾಡುತ್ತೇವೆ ಎಂದಿರುವುದು ಸರಿಯಲ್ಲ ಎಂದು ಛಲವಾದಿ ಆಕ್ಷೇಪಿಸಿದರು.