ಜಿಲ್ಲಾಧಿಕಾರಿ ಕ್ರಮ ಖಂಡಿಸಿ ಬಿಜೆಪಿ ಮುಖಂಡರ ಪ್ರತಿಭಟನೆ

ಹಾವೇರಿ: ನಗರಸಭೆ ಅಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸ ಮಂಡನೆ ಠರಾವನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿರುವುದು ಹಾಗೂ ಕಾನೂನು ಉಲ್ಲಂಘಿಸಿ ನಗರಸಭಾಧ್ಯಕ್ಷ ಸ್ಥಾನದಲ್ಲಿ ಹಿಂದಿನ ಅಧ್ಯಕ್ಷರು ಮುಂದುವರಿದಿರುವುದನ್ನು ಖಂಡಿಸಿ ಬಿಜೆಪಿ ತಾಲೂಕು ಘಟಕದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನಗರಸಭೆಯ ಸದಸ್ಯರು ಎಂ.ಜಿ. ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಹಾಯ್ದು ಮೈಲಾರ ಮಹದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ವೇಳೆ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪೌರಾಯುಕ್ತರು, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ ಹಾಗೂ ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಫಲಕ ಹಿಡಿದು ಘೊಷಣೆ ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ಜಿಲ್ಲಾಧಿಕಾರಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪುರಸಭೆ ಕಾಯ್ದೆಗೆ 2003ರಲ್ಲಿ ಆಗಿರುವ ತಿದ್ದುಪಡಿಯಂತೆ ಬಿಜೆಪಿ ಸದಸ್ಯರು ನಗರಸಭೆ ಅಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ಕಾನೂನಾತ್ಮಕವಾಗಿದೆ. ಆದರೂ ಜಿಲ್ಲಾಧಿಕಾರಿಯವರು ಹಳೆಯ ಕಾನೂನು ಓದಿಕೊಂಡು ಠರಾವನ್ನು ಅಮಾನತುಗೊಳಿಸಿದ್ದಾರೆ. ಕಾಂಗ್ರೆಸ್​ನವರಿಗೆ ನಿಷ್ಠೆ ತೋರಲು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಸದಸ್ಯ ರುದ್ರೇಶ ಚಿನ್ನಣ್ಣನವರ, ನಗರಸಭೆ ಉಪಾಧ್ಯಕ್ಷ ಇರ್ಫಾನ್ ಪಠಾಣ, ಸದಸ್ಯರಾದ ಜಗದೀಶ ಮಲಗೋಡ, ನಿರಂಜನ ಹೇರೂರ, ಕರಬಸಪ್ಪ ಹಳದೂರ, ಹನುಮಂತಪ್ಪ ದೇವಗಿರಿ, ಲಲಿತಾ ಗುಂಡೇನಹಳ್ಳಿ, ಜಿಲ್ಲಾ ವಕ್ತಾರ ಸುರೇಶ ಹೊಸಮನಿ, ಪಿ.ಡಿ. ಶಿರೂರ, ವಿರುಪಾಕ್ಷ ನರಗುಂದ, ಮಾಣಿಕಚಂದ ಲಾಡರ, ಮಹಾಲಿಂಗಸ್ವಾಮಿ ಹಿರೇಮಠ, ಗಿರೀಶ ಶೆಟ್ಟರ, ಕೆ.ಸಿ. ಕೋರಿ, ಪ್ರಭು ಹಿಟ್ನಳ್ಳಿ, ಗಿರೀಶ ತುಪ್ಪದ ಇನ್ನಿತರರು ಇದ್ದರು.

ಪ್ರಾದೇಶಿಕ ಆಯುಕ್ತರಿಂದ ಡಿಸಿಗೆ ನೋಟಿಸ್

ನಗರಸಭೆ ಅಧ್ಯಕ್ಷರ ಅವಿಶ್ವಾಸ ಠರಾವನ್ನು ಅಮಾನತುಗೊಳಿಸಿ ಆದೇಶಿಸಿರುವ ಹಿನ್ನಲೆಯಲ್ಲಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಜಿಲ್ಲಾಧಿಕಾರಿಗೆ ಜು. 17ರಂದು ನೋಟಿಸ್ ಜಾರಿಯಾಗಿದೆ. ಜು. 19ರಂದು ಆಯುಕ್ತರ ಮುಂದೆ ಬೆಳಗ್ಗೆ 11ಕ್ಕೆ ಹಾಜರಾಗಿ ಸ್ಟಷ್ಟನೆ ನೀಡುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದೆ.