More

    ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ: ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

    ಮಂಡ್ಯ: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ವಿಧಾನಸೌಧದಲ್ಲಿ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ.
    ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತಾರೆನ್ನುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇತ್ತ ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಮುಖಂಡರು ಮತ್ತು ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗದಲ್ಲಿ ಸಾಗಿದರು. ಕಾಂಗ್ರೆಸ್ ಕಚೇರಿಯತ್ತ ಹೊರಟಾಗ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನ ಹಾಕಿ ಮೆರವಣಿಗೆ ಮುಂದೆ ಸಾಗದಂತೆ ಪೊಲೀಸರು ತಡೆದರು.
    ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಬ್ಯಾರಿಕೇಡ್ ಮೇಲೆರಿದ ಕೆಲ ಕಾರ್ಯಕರ್ತರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್ ತಡೆ ಬೇದಿಸಿ ಮುನ್ನುಗುವ ಯತ್ನ ಮಾಡಿದಾರಾದರೂ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಮುಖಂಡರಾದ ಅಶೋಕ್ ಜಯರಾಂ, ಅರವಿಂದ್, ಸಿ.ಟಿ.ಮಂಜುನಾಥ್, ಅಶೋಕ್‌ಕುಮಾರ್, ಕೇಶವ, ನಾಗಮಂಗಲ ನರಸಿಂಹ, ಹೊಸಹಳ್ಳಿ ಶಿವು, ನರಸಿಂಹಚಾರ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
    ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ ವಿಜೇತ ಅಭ್ಯರ್ಥಿ ನಾಸೀರ್ ಹುಸೇನ್ ಬೆಂಬಲಿಗ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹೋಗಿದ್ದಾರೆ. ಇದು ದೇಶದ್ರೋಹಿ ಕೃತ್ಯವಾಗಿದೆ. ಇಂತಹ ಹೀನಕೃತ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಮಾತ್ರವಲ್ಲದೆ ದೇಶದ್ರೋಹಿಯನ್ನು ಸ್ಥಳದಲ್ಲಿಯೇ ಬಂಧಿಸದೆ ಹಾಗೆಯೇ ಬಿಟ್ಟಿದ್ದು, ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ ನಂತರ ಪೊಲೀಸರು ದೂರು ದಾಖಲಿಸಿಕೊಂಡಿರುತ್ತಾರೆ. ಇದನ್ನು ಗಮನಿಸಿದರೆ ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.
    ದೇಶದ ಗಡಿಯಲ್ಲಿ ಸೈನಿಕರು ದೇಶ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಪ್ರಾಣದ ಹಂಗು ತೊರೆದು ಭಾರತೀಯರ ರಕ್ಷಣೆ ಮಾಡುತ್ತಿದ್ದು, ಶತ್ರು ರಾಷ್ಟ್ರ ಪಾಕಿಸ್ತಾನ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದರೆ ಭಾರತೀಯ ಸೈನಿಕರಿಗೆ ಅವಮಾನ ಮಾಡಿದಂತಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆಗ ದೇಶದ್ರೋಹಿಗಳಿಗೆ ಮತ್ತು ಪಾಕಿಸ್ತಾನ ಸಮರ್ಥಕರಿಗೆ ಬಲ ಬಂದಂತೆ ಆಗುತ್ತಿದೆ. ವಿಧಾನಸೌಧದಲ್ಲಿ ಕೇಳಿಬಂದಿರುವ ಪಾಕಿಸ್ತಾನ ಜಿಂದಾಬಾದ್ ಜೈಕಾರಕ್ಕೆ ಕಾಂಗ್ರೆಸ್ ಈವರೆಗೆ ಮಾಡಿರುವ ತುಷ್ಟಿಕರಣದ ರಾಜಕಾರಣವೇ ಕಾರಣ ಎಂದು ದೂರಿದರು.
    ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಸಮರ್ಥನೆಗೆ ಮುಂದಾಗಿರುವ ಕಾಂಗ್ರೆಸ್ ಪಕ್ಷದ ನಡೆ ದೇಶದ್ರೋಹಿಯಾಗಿದೆ. ಆರೋಪಿಯ ಪರ ವಕಾಲತ್ತು ಬಯಸುವುದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೇಶಭಕ್ತಿ, ಭಾರತ ಮಾತೆ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ದೇಶದ್ರೋಹಿಯನ್ನು ಬಂಧಿಸಲಿ. ರಾಜ್ಯ ಪೊಲೀಸ್ ಇಲಾಖೆ, ಗೃಹ ಸಚಿವರು ಆರೋಪಿಗಳನ್ನ ಬಂಧಿಸಲು ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಸಾಮಾನ್ಯ ಸಂಗತಿಯಲ್ಲ. ದೇಶ ದ್ರೋಹಕ್ಕೆ ಕುಮ್ಮಕ್ಕು ನೀಡುವ ಕೃತ್ಯ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಮುಖಂಡರಾದ ಸಿಂಧು, ಶ್ವೇತಾ ಅಶೋಕ್, ಮಮತಾ ಚಂದನ್, ತಾಯಮ್ಮ, ಪುಟ್ಟಮ್ಮ, ವರಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts