ಮೋದಿ ಅಲೆ ನೆಚ್ಚಿಕೊಳ್ಳದೆ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡು ರಾಷ್ಟ್ರ ಕಟ್ಟಿ

ಬೆಂಗಳೂರು: ಪ್ರತಿ ಚುನಾವಣೆಯಲ್ಲೂ ಮೋದಿ ಅಲೆಯನ್ನೆ ನೆಚ್ಚಿಕೊಳ್ಳದೆ, ವೈಯಕ್ತಿಕ ವರ್ಚಸ್ಸುಗಳಿಸಿಕೊಂಡು ಚುನಾವಣೆ ಗೆಲ್ಲುವ ಪ್ರಯತ್ನ ಮಾಡಬೇಕು. ಪಕ್ಷದ ತತ್ವ, ಸಿದ್ಧಾಂತಗಳನ್ನು ರೂಢಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆರ್​ಎಸ್​ಎಸ್ ನಾಯಕರು ಬಿಜೆಪಿ ಸಂಸದರಿಗೆ ಸಲಹೆ ನೀಡಿದ್ದಾರೆ.

ಸದಾಶಿವನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಮಂಗಳವಾರ ಮೊದಲ ಬಾರಿಗೆ ಬಿಜೆಪಿ ಸಂಸದರ ಹಾಗೂ ಆರ್​ಎಸ್​ಎಸ್ ನಾಯಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ವಿವಿಧ ವಿಚಾರಗಳ ಕುರಿತು ಸುದೀರ್ಘ ಸಭೆ ನಡೆಯಿತು. ಬಿಜೆಪಿ ಜತೆ ಸಂವಹನಕ್ಕೆ ಆರ್​ಎಸ್​ಎಸ್​ನಿಂದ ನಿಯೋಜನೆಗೊಂಡಿರುವ ಸಹ ಸರಕಾರ್ಯವಾಹ ಸಿ.ಆರ್.ಮುಕುಂದ ಹಾಗೂ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ಸಂಘಚಾಲಕ ವಿ.ನಾಗರಾಜ್ ಭಾಗವಹಿಸಿದ್ದರು.

ಸಂಸದರು ರಾಜಕೀಯ, ವೈಯಕ್ತಿಕ ಬದುಕಿನಲ್ಲಿ ಶುದ್ಧತೆ ಕಾಪಾಡಿಕೊಂಡು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಕೆಲಸ ಮಾಡಿ ಕ್ಷೇತ್ರದ ಜನರ ಜತೆ ನಿರಂತರ ಸಂಪರ್ಕ ಹೊಂದಿರಬೇಕು. ಆರ್​ಎಸ್​ಎಸ್ ನಾಯಕರ ಜತೆ ಸಂಪರ್ಕ ಇಟ್ಟುಕೊಳ್ಳಬೇಕು. ಬಿಜೆಪಿ ಮತ್ತು ಆರ್​ಎಸ್​ಎಸ್ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು. ಮುಂದಿನ 5 ವರ್ಷಕ್ಕೆ ಬೇಕಾದ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ನಡೆಯೋಣ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ನೂತನ ಸಂಸದರ ಸಂತಸ: ಸಂಘದ ಕಾರ್ಯಕರ್ತರು ಚುನಾವಣೆಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದಕ್ಕೆ ವಿಶೇಷವಾಗಿ ಹೊಸಬರು ಆಶ್ಚರ್ಯ ಮತ್ತೆ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ, ರಾಜ್ಯ ಉಸ್ತುವಾರಿ ಮುರಳಿಧರ್ ರಾವ್, ಈಶ್ವರಪ್ಪ, ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿ ನೂತನ ಬಿಜೆಪಿ ಸಂಸದರು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಘದ ಪ್ರಮುಖರು ಬಿಜೆಪಿಯ ಚುನಾಯಿತ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಚುನಾವಣೆಗೆ ಮೊದಲು ರಾಷ್ಟ್ರೀಯ ವಿಚಾರಗಳ ಬಗ್ಗೆ ಚುನಾವಣೆ ಎದುರಿಸುವ ಬಗ್ಗೆ ಸೂಚನೆ ಕೊಟ್ಟಿದ್ದರು. ಈಗ ಮುಂದಿನ ಜವಾಬ್ದಾರಿಗಳನ್ನು ವಿವರಿಸಿದ್ದಾರೆ. ಕ್ಷೇತ್ರ, ರಾಜ್ಯದ ಬಗ್ಗೆ ಕಾಳಜಿ ವಹಿಸಲು ಸೂಚನೆ ಕೊಟ್ಟಿದ್ದಾರೆ. ರಾಜ್ಯದ ಮಂತ್ರಿಗಳು ತಿಂಗಳಿಗೊಮ್ಮೆ ಸಭೆ ಮಾಡಬೇಕು, ಆದ್ಯತಾ ವಿಚಾರ ಗುರುತಿಸಿ ಅನುಷ್ಠಾನ ಮಾಡಲು ಸೂಚಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿ ತನ್ನ ಕ್ಷೇತ್ರ, ರಾಜ್ಯ, ದೇಶಕ್ಕೆ ಹೇಗೆ ಕೆಲಸ ಮಾಡಬೇಕು ಎಂಬ ಸಲಹೆಯನ್ನು ಹಿರಿಯರು ಕೊಟ್ಟಿದ್ದಾರೆ ಎಂದು ತಿಳಿಸಿದರು. ಸಂಸದರ ಸಭೆಯ ಬಳಿಕ ಪಕ್ಷದ ಹಿರಿಯ ನಾಯಕರ ಜತೆ ಆರ್​ಎಸ್​ಎಸ್ ಮುಖಂಡರು ಮತ್ತೊಂದು ಸುತ್ತಿನ ಸಭೆ ನಡೆಸಿ ರ್ಚಚಿಸಿದರು.

ವಿಶ್ವನಾಥ್ ರಾಜೀನಾಮೆ ಜೆಡಿಎಸ್​ಗೆ ಸಂಬಂಧಿಸಿದ್ದು ನಾನು ಏನೂ ಹೇಳುವುದಿಲ್ಲ. ರಾಮಲಿಂಗರೆಡ್ಡಿ ಮತ್ತು ರೋಷನ್ ಬೇಗ್ ಅಸಮಾದಾನ ಕೂಡ ಅವರ ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ಅಸಮಾದಾನಿತ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ.

| ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಸಲಹೆಗಳು:

  • ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡಬೇಡಿ
  • ಮುಂದಿನ 3 ತಿಂಗಳೊಳಗೆ ಯಡಿಯೂರಪ್ಪ ಜತೆ ರ್ಚಚಿಸಿ ಕ್ಷೇತ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿಕೊಳ್ಳಿ
  • ಬಳಸುವ ಭಾಷೆ ಬಗ್ಗೆ ಎಚ್ಚರವಿರಲಿ
  • ಸಂಘದ ಚಟುವಟಿಕೆಗೆ ಬೆಂಬಲ ಇರಲಿ
  • ದೆಹಲಿ ಮಟ್ಟದಲ್ಲಿ ಒಗ್ಗಟ್ಟಾಗಿ ಅಭಿವೃದ್ಧಿಗೆ ಗಮನ ಕೊಡಿ
  • ಪಕ್ಷ ಸೋತಿರುವ ಕ್ಷೇತ್ರಗಳಲ್ಲೂ ಸಂಘಟನೆಗೆ ಆದ್ಯತೆ ಕೊಡಿ.

ವಿಶ್ವನಾಥ್ ರಾಜೀನಾಮೆ ಅವರ ಪಕ್ಷದ ಆಂತರಿಕ ವಿಚಾರ. ಕಾಂಗ್ರೆಸ್, ಜೆಡಿಎಸ್​ನಲ್ಲಿ ಸತ್ಯ ಸಂಗತಿಗಳನ್ನು ಹೇಳುವವರೂ ಇದ್ದಾರೆ ಎನ್ನೋದು ಗೊತ್ತಾಗಿದೆ.

| ಡಿ.ವಿ. ಸದಾನಂದಗೌಡ ಕೇಂದ್ರ ಸಚಿವ

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೂ ಕೂಡಾ ಸರಿ ಇಲ್ಲ. ಅನುಭವಿ ರಾಜಕಾರಣಿ ವಿಶ್ವನಾಥ್ ಸರ್ಕಾರದಲ್ಲಿ ಯಾವ ರೀತಿ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಚುನಾವಣಾ ಸೋಲಿಗೆ ಪ್ಯಾಚಪ್ ಮಾಡಲು ಗ್ರಾಮ ವಾಸ್ತವ್ಯಕ್ಕೆ ಹೊರಟಿದ್ದಾರೆ. ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರ ಕಾದಿದೆ.

| ಶ್ರೀರಾಮುಲು ಬಿಜೆಪಿ ಶಾಸಕ

ಗೃಹ ಸಚಿವ ಎಂ.ಬಿ. ಪಾಟೀಲರಿಗೆ ಲಿಂಗಾಯತರ ಬಗ್ಗೆ ಕಾಳಜಿ ಇದ್ದರೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲು ಸಹಕರಿಸಲಿ. ಬಿಜೆಪಿ ತತ್ವ ರಾಜಕಾರಣ, ಹಿಂದುತ್ವದ ರಾಜಕಾರಣ ಮಾಡುತ್ತದೆ ಹೊರತು ಜಾತಿ ರಅಜಕಾರಣ ಮಾಡಲ್ಲ.

| ಸಿ.ಟಿ. ರವಿ ಶಾಸಕ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿಕೆ ಗಮನಿಸಿದ್ದೇನೆ. ಈ ಸರ್ಕಾರದಲ್ಲಿ ಯಾವ ಇಲಾಖೆಯೂ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ಸರ್ಕಾರದಲ್ಲಿ ಯಾವ ಕೆಲಸವೂ ನಡೆಯುತ್ತಿಲ್ಲ ಎಂಬುದು ಸ್ಪಷ್ಟ. ಸರ್ಕಾರಕ್ಕೆ ಮತ್ತು ಜನತೆಗೆ ಗೌರವ ಬರಬೇಕೆಂದರೆ ಸಿಎಂ ರಾಜೀನಾಮೆ ಕೊಡಬೇಕು. ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ತೇಪೆ ಹಾಕಿಕೊಂಡು ಇರುವುದು ಸರಿಯಲ್ಲ.ನಡೆಯಲೂ ಆಗದೇ ತೆವಳಿಕೊಂಡು ಹೋಗ್ತಿರುವ ಸರ್ಕಾರ ಇದು. ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ.

| ಆರ್. ಅಶೋಕ್ ಮಾಜಿ ಡಿಸಿಎಂ

Leave a Reply

Your email address will not be published. Required fields are marked *